ಕಾಸರಗೋಡು: ಸಮುದಾಯ ಸಂಘಟನೆಗಳು ತಳಮಟ್ಟದಿಂದ ಬಲಗೊಂಡು, ದೇಶದ ಸಂಸ್ಕøತಿ, ಮೌಲ್ಯ ಮೈಗೂಡಿಸಿಕೊಳ್ಳುವುದರಿಂದ ಹಿಂದೂ ಸಂಘಟನೆ ಮತ್ತಷ್ಟು ಸದೃಢಗೊಳ್ಳಲು ಸಾಧ್ಯ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಪರಿವಾರ ಬಂಟರ ಸಂಘದ ವತಿಯಿಂದ ಕಾಸರಗೋಡು ಕೊರುವೈಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾದ ವಿಶ್ವ ಪರಿವಾರ ಬಂಟರ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಎಲ್ಲ ಸಮಾಜಕ್ಕೂ ಅದರದ್ದೇ ಅದ ಸಂಸ್ಕøತಿ, ರಿವಾಜುಗಳಿದ್ದು, ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಸಮಾಜದ ಪ್ರಮುಖರಿಂದಾಗಬೇಕು. ಸಮುದಾಯ ಸಂಘಟನೆಯ ಚಟುವಟಿಕೆ ಸಮಾಜದ ಉನ್ನತಿಗೆ ಸಹಕಾರಿಯಾಗಲಿ ಎಂದು ತಿಳಿಸಿದರು.
ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎ. ಸಂತೋಷ್ ಕುಮಾರ್ ಕಾಯರ್‍ಮಜಲ್ ಅಧ್ಯಕ್ಷತೆ ವಹಿಸಿದ್ದರು. ಸುವರ್ಣಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ಡಾ. ಕೆ.ಸಿ ನಾಯ್ಕ್ ಗೌರವಾಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡಿ, ಸ್ವಾವಲಂಬಿಗಳಾಗಿ ಜೀವನ ಸಾಗಿಸಿದಾಗ ಬದುಕು ಸಾಫಲ್ಯತೆಯೆಡೆಗೆ ಸಾಗಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸ್ಥಾನಮಾನ ಪಡೆದುಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯ. ಜಾತಿ ಸಂಘಟನೆ ಜತೆಗೆ ನಾವೆಲ್ಲರೂ ಹಿಂದೂ ಎಂಬ ಚಿಂತನೆ ಪ್ರತಿಯೊಬ್ಬನಲ್ಲಿ ಮೂಡಿಬಂದಾಗ ಹಿಂದೂಸಮಾಜ ಮತ್ತಷ್ಟು ಬಲಿಷ್ಠಗೊಳ್ಳಲು ಸಹಕಾರಿ. ಮೊಬೈಲ್, ಸಾಮಾಜಿಕ ಜಾಲತಾಣಗಳ ಹೆಚ್ಚಿನ ಬಳಕೆ ಪರಸ್ಪರ ಪ್ರೀತಿ-ಹೊಂದಣಿಕೆಯ ಬದುಕಿಗೆ ತೊಡಕುಂಟಾಗುವ ಭೀತಿ ಆವರಿಸತೊಡಗಿದೆ. ಸಮಾಜವನ್ನು ಮೇಲಕ್ಕೆತ್ತಲು ಹಾಗೂ ಸ್ವಾಭಿಮಾನದ ಬದುಕು ನಡೆಸಲು ಸಂಘಟನೆಗಳ ಚಟುವಟಿಕೆ ಅನಿವಾರ್ಯ ಎಂದು ತಿಳಿಸಿದರು.
ಬ್ರಹ್ಮಶ್ರೀ ವಿಷ್ಣಪ್ರಕಾಶ್ ಪಟ್ಟೇರಿ ಕಾವುಮಠ, ಸತ್ಯನಾರಾಯಣ ಅಗ್ಗಿತ್ತಾಯ ದಿವ್ಯ ಉಪಸ್ಥಿತಿ ವಹಿಸಿದ್ದರು. ಪಿ.ವಿಶ್ವನಾಥ ನಾಯ್ಕ್ ಸಕಲೇಶ್‍ಪುರ, ಅಡೂರು ಗಣೇಶ್ ನಾಯ್ಕ್, ಕರ್ನಾಟಕ ಹೈಕೋರ್ಟಿನ ವಕೀಲ ವಿನೋದ್‍ಕುಮಾರ್ ಮಧೂರು, ರತನ್‍ಕುಮಾರ್ ನಾಯ್ಕ್ ಪಾಲೆಕೊಚ್ಚಿ, ಸುಧಾಕರ ನಾಯ್ಕ್, ರವೀಂದ್ರ ನಾಯ್ಕ್, ಸತೀಶ್ ಎ, ರಘುನಾಥ ನಾಯ್ಕ್, ಪುಷ್ಪರಾಜ್ ನಾಯ್ಕ್, ರಘುವೀರ ನಾಯ್ಕ್, ಸಂಜೀವ, ಕಿಶೋರ್ ನಾಯ್ಕ್, ವಿದ್ಯಾಧರ ನಾಯ್ಕ್, ವಿಠಲ ನಾಯ್ಕ್, ಶಂಕರ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು. ಮನೋಹರ್ ನಾಯ್ಕ್ ಕೊಳ್ಕೆಮಾರ್ ಸ್ವಾಗತಿಸಿದರು. ಈ ಸಂದರ್ಭ ಸಮುದಾಯದ ವಿವಿಧ ತರವಾಡಿನ ಮುಖ್ಯಸ್ಥರನ್ನು ಮತ್ತು ಸಾಧಕರನ್ನು ಗೌರವಿಸಲಾಯಿತು. ಡಾ. ಜಯಪ್ರಕಾಶ್ ನಾಯ್ಕ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ, ವಿಚಾರಗೊಷ್ಠಿ, ವಿವಿಧ ವಲಯಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.