HEALTH TIPS

ಅಂಗಾಂಗಗಳಿಗೂ ಬಂತು ಮುದ್ರಣ ತಂತ್ರಜ್ಞಾನ!

 ಪಘಾತಗಳಲ್ಲಿ ಕಾಲು ಕಳೆದುಕೊಂಡವರು ಅಥವಾ ಹುಟ್ಟಿನಿಂದಲೇ ಅಂಗವಿಕಲರಾಗಿರುವವರಿಗೆ ತಾವೂ ಎಲ್ಲರಂತೆ ಬದುಕಬೇಕು ಎಂಬ ಕನಸು ಸಹಜವಾಗಿಯೇ ಇರುತ್ತದೆ. ಹಾಲಿ ಲಭ್ಯವಿರುವ ಕೃತಕ ಕೈ-ಕಾಲುಗಳು ಸಂಪೂರ್ಣ ಕಾರ್ಯಕ್ಷಮತೆ ನೀಡುವ ಶಕ್ತಿಯನ್ನು ಹೊಂದಿರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಈಗ ಹೊಸ ತಂತ್ರಜ್ಞಾನದ ಶೋಧವಾಗಿದೆ.

ಬೇಕಾದ ಅಂಗಗಳನ್ನು 3ಡಿ ಪ್ರಿಂಟಿಂಗ್ ಮೂಲಕ ಮುದ್ರಿಸುವ ಹೊಸ ಸಾಧ್ಯತೆ ಲಭಿಸಿದೆ.

ರೊಬೋಟಿಕ್ಸ್ ಕ್ಷೇತ್ರ ಇಂದು ಸಾಕಷ್ಟು ಬೆಳೆದಿದೆ. ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾದಂತೆ ಉತ್ಪನ್ನಗಳ ತಯಾರಿಯ ನಿಖರತೆಯೂ ಹೆಚ್ಚಾಗುತ್ತಿದೆ. ವೈದ್ಯಕೀಯ ಲೋಕದ ಕೃತಕ ಅಂಗಗಳ ಬೇಡಿಕೆಯನ್ನು ನೀಗಿಸಲು ಹಾಗೂ ಭವಿಷ್ಯದಲ್ಲಿ ರೋಬಾಟ್‌ಗಳನ್ನು ಮಾನವಸ್ವಭಾವದ ಸನಿಹಕ್ಕೆ ತರುವ ನಿಟ್ಟಿನಲ್ಲಿ ಈ ಸಂಶೋಧನೆ ಮಹತ್ವದ್ದು ಎಂದು ವ್ಯಾಖ್ಯಾನಿಸಲಾಗಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಇರುವ 'ಇಟಿಎಚ್ ಜ್ಯೂರಿಚ್ ಸಂಶೋಧನಾ ವಿಶ್ವವಿದ್ಯಾಲಯ'ದ ಸಂಶೋಧಕರ ತಂಡವು ಈ ಹೊಸ ಸಂಶೋಧನೆಯನ್ನು ಮಾಡಿದೆ. 3ಡಿ ಮುದ್ರಣ ತಂತ್ರಜ್ಞಾನದ ಮೂಲಕ ಮೂಳೆ, 'ಲಿಗಮೆಂಟ್' (ಅಸ್ಥಿರಜ್ಜು) ಹಾಗೂ 'ಟೆಂಡಾನ್'(ಸ್ನಾಯುರಜ್ಜು)ಗಳನ್ನು ಮುದ್ರಿಸಿ ಪ್ರಕೃತಿ ಸಹಜವಾದ ಅಂಗವನ್ನು ಸಂಶೋಧಕರು ತಯಾರಿಸಿದ್ದಾರೆ.


ಈಗಿರುವ 'ಪ್ರಾಸ್ತೆಟಿಕ್' (ಕೃತಕ) ಅಂಗಗಳಲ್ಲಿ ಉಕ್ಕು, ಪ್ಲಾಟಿನಂ, ಫೈಬರ್, ಇಂಗಾಲದಂತಹ ಧಾತುಗಳನ್ನು ಕೀಲುಗಳಿರುವ ಯಾಂತ್ರಿಕ ಸ್ವರೂಪದಲ್ಲಿ ಬಳಸಲಾಗುತ್ತಿದೆ. ಕೈ, ಕಾಲುಗಳಂತಹ ಅಂಗಗಳನ್ನು ಈ ವಿಧಾನದಲ್ಲಿ ನಿರ್ಮಿಸಿದಾಗ ಸಹಜತೆ ತರುವುದು ಕಷ್ಟ. ಅಲ್ಲದೇ, ಈ ಕೃತಕ ಅಂಗಗಳ ಚಲನೆ, ಬಳಕೆಯು ನಿಖರವಾಗಿ ಆಗದ ಕಾರಣ ಬಳಕೆದಾರರು ತಮ್ಮ ದಿನನಿತ್ಯದ ಕೆಲಸಗಳನ್ನು ಪರಿಪೂರ್ಣವಾಗಿ ನಡೆಸಲು ಅಸಮರ್ಥರಾಗುತ್ತಾರೆ‌. ಅಲ್ಲದೇ, ಈ ಕೃತಕ ಅಂಗಗಳು ಮಾನವ ಅಂಗಗಳ ನೈಸರ್ಗಿಕ ಸ್ವರೂಪವನ್ನು ಹೋಲದ ಕಾರಣ ಸಾರ್ವಜನಿಕವಾಗಿ ಮುಜುಗರ, ಆತ್ಮಬಲದ ಕೊರತೆಯನ್ನೂ ಎದುರಿಸಬೇಕಾದ ಪರಿಸ್ಥಿತಿ ಇದೆ. ಅಲ್ಲದೇ, ಸಾರ್ವಜನಿಕರೂ ಕೃತಕ ಅಂಗವನ್ನು ಧರಿಸುವವರನ್ನು ಭಿನ್ನವಾಗಿ ಕಾಣುವ ಮನಃಸ್ಥಿತಿಯಿಂದ ಹೊರಬರದೇ ಇರುವುದು ಅಂಗವಿಕಲರನ್ನು ಮತ್ತಷ್ಟು ಮುಜುಗರಕ್ಕೆ ತಳ್ಳುವಂತೆ ಆಗಿದೆ.

ಏನಿದು ತಂತ್ರಜ್ಞಾನ?:

ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆದಿದೆ. ಮಾನವದೇಹದ ಅಂಗಗಳಿಗೆ ಆಧಾರಸ್ತಂಭ ಮೂಳೆಗಳು, ಬಳಿಕ ಸ್ನಾಯುಗಳು, ಅವುಗಳ ಜೊತೆಯಲ್ಲಿ ನರಮಂಡಲ. ಇವುಗಳ ಸರಾಗ ಚಲನೆಗೆ ಪೂರಕವಾದ ರಕ್ತದಂತಹ ದ್ರಾವಣಗಳು. ಇವೆಲ್ಲವನ್ನೂ ಮುಚ್ಚುವ, ರಕ್ಷಣೆ ನೀಡುವ ಹಾಗೂ ಅಂದವನ್ನು ಕೊಡುವ ಚರ್ಮ. ಇವಿಷ್ಟು ಇದ್ದಲ್ಲಿ ಅವನ್ನು ಸಮಗ್ರವಾಗಿ 'ಅಂಗ' ಎಂದು ಕರೆಯಬಹುದು.


ಈ ನೈಸರ್ಗಿಕ ರಚನೆಯನ್ನು ನಕಲು ಮಾಡುವ ಮೂಲಕ ಕೃತಕ ಅಂಗಗಳ ನಿರ್ಮಾಣಕ್ಕೆ ಹೊಸ ಆಯಾಮವನ್ನು ನೀಡುವ ಪ್ರಯತ್ನವನ್ನು ಇಟಿಎಚ್ ಜ್ಯೂರಿಚ್ ವಿಜ್ಞಾನಿಗಳು ಮಾಡಿದ್ದಾರೆ. 3ಡಿ ಮುದ್ರಣ ಈಗ ಪ್ರಸಿದ್ಧಿ ಪಡೆಯುತ್ತಿದೆ. ಲೋಹ, ಫೈಬರ್ ಸೇರಿದಂತೆ ಬಹುತೇಕ ಎಲ್ಲ ಬಗೆಯ ಕೃತಕ ಹಾಗೂ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಮುದ್ರಣಕಾರ್ಯ ಮಾಡಲಾಗುತ್ತಿದೆ.
'ಕೃತಕ ಅಂಗಗಳನ್ನು ನಿರ್ಮಿಸುವಾಗ ಮೂಳೆಯಂತಹ ರಚನೆಗಳಿಗೆ ಹೋಲುವ ವಸ್ತುಗಳನ್ನು ಬಳಸಿಕೊಂಡು ಮುದ್ರಣಕಾರ್ಯ ಆರಂಭವಾಗುತ್ತದೆ. ಬಳಿಕ ಸ್ನಾಯು, ನರಮಂಡಳ ಹಾಗೂ ಚರ್ಮವನ್ನು ಹೋಲುವ ವಸ್ತುಗಳಿಂದ ಮುದ್ರಣಕಾರ್ಯ ನಡೆಯುತ್ತದೆ. ಇದು ಬಲು ಸಂಕೀರ್ಣವಾದ ಯಾಂತ್ರಿಕ ಕಾರ್ಯ. ಏಕೆಂದರೆ ಇಲ್ಲಿ ನಿರ್ಮಾಣವಾಗುವುದು ಮಾನವನ ಬಳಕೆಗೆ ಸಹಾಯವಾಗುವ ಕೃತಕ ಅಂಗ. ಹಾಗಾಗಿ, ಅಂಗವೊಂದು ನೈಸರ್ಗಿಕವಾಗಿ ಕೆಲಸ ಮಾಡಬೇಕಾದರೆ ಅದರಲ್ಲಿ ಎಲ್ಲ ಬಗೆಯ ಕ್ರಿಯೆಗಳು ನಡೆಯಬೇಕು. ಮೂಳೆ, ಸ್ನಾಯು, ನರಮಂಡಳ ಹಾಗೂ ಚರ್ಮವು ಕೆಲಸ ಮಾಡಲು ಬೇಕಾದ ಅವಕಾಶವನ್ನು ಸೃಷ್ಟಿಸಬೇಕು. ಅದಕ್ಕೆ ಪ್ರಮುಖವಾಗಿ ಬೇಕಿರುವುದು ವಿದ್ಯುತ್‌. ಹಾಗಾಗಿ, ಕೃತಕ ಅಂಗದೊಳಗೆ ಸೂಕ್ಷ್ಮ ಬ್ಯಾಟರಿಗಳನ್ನು ಸಹ ಇಡಲಾಗುತ್ತದೆ‌. ಇವೆಲ್ಲದಕ್ಕೂ ಜಾಗ ಒದಗಿಸಬೇಕಾದ ಸವಾಲು ವಿಜ್ಞಾನಿಗಳಿಗಿತ್ತು. ಅದನ್ನು ಯಶಸ್ವಿಯಾಗಿ ಪೂರೈಸಲಾಯಿತು' ಎಂದು ವಿಜ್ಞಾನಿ ಹಾಗೂ ರೊಬಾಟಿಕ್ಸ್ ಪ್ರಾಧ್ಯಾಪಕ ಡಾ. ರಾಬರ್ಟ್ ಕ್ಯಾಟ್ಸ್ ಮನ್ ಹೇಳಿದ್ದಾರೆ.

ಮುದ್ರಣ ತಂತ್ರಜ್ಞಾನ ಇಂದು ಸಾಕಷ್ಟು ಸುಧಾರಿಸಿದೆ. ಚರ್ಮದ ಮೇಲಿನ ಕೂದಲು, ಚರ್ಮದ ಸುಕ್ಕು, ಬಣ್ಣ - ಹೀಗೇ ಯಾವುದೇ ಬಗೆಯ ರಚನೆ ಹಾಗೂ ಸ್ವರೂಪವನ್ನು ಅಂಗವೊಂದಕ್ಕೆ ನೀಡುವುದು ಈಗ ಸವಾಲಾಗಿಯೂ ಉಳಿದಿಲ್ಲ ಎಂದಿದ್ದಾರೆ.

ರೋಬೋಟ್ ಕ್ಷೇತ್ರಕ್ಕೆ ಬಲವರ್ಧನೆ:

'ಈ ನಮ್ಮ ಸಂಶೋಧನೆಯು ಕೃತಕ ಅಂಗಗಳ ಕ್ಷೇತ್ರಕ್ಕೆ ಮಾತ್ರ ಮೀಸಲಲ್ಲ. ರೋಬೋಟ್‌ಗಳನ್ನು ಮಾನವನಿಗೆ ಹೆಚ್ಚು ಆತ್ಮೀಯಗೊಳಿಸುವ ನಿಟ್ಟಿನಲ್ಲೂ ಮಹತ್ವದ ಪಾತ್ರ ವಹಿಸಲಿದೆ. ರೋಬೋಟ್‌ಗಳು ಮಾನವರಂತೆ ಕಂಡರೆ ಮಾನವಸಮುದಾಯ ರೋಬೋಟನ್ನು ಸ್ವೀಕರಿಸುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚೆಚ್ಚು ವಿಕಸನಗೊಳ್ಳುತ್ತಿರುವುದರಿಂದ, ಭವಿಷ್ಯದಲ್ಲಿ ರೋಬೋಟ್‌ಗಳು ಮಾನವ‌ಸಮುದಾಯದ ನಡುವೆ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿವೆ. ಆಗ ಮಾನವನನ್ನು ಹೋಲುವ ರೋಬೋಟ್‌ಗಳು ಯಶ್ವಸ್ವಿಯಾಗುತ್ತದೆ. ಆ ಯಶಸ್ಸಿಗೆ ನಮ್ಮ ಸಂಶೋಧನೆಯು ಪ್ರಮುಖ ಪಾತ್ರ ವಹಿಸಲಿದೆ' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.


'ನಮ್ಮ ತಂತ್ರಜ್ಞಾನವು ಈಗ‌ ಕೃತಕ ಅಂಗಕ್ಕೆ ಮೀಸಲಾಗಿದ್ದರೂ, ಇದೇ ತಂತ್ರಜ್ಞಾನವು ರೋಬೋಟ್‌ನ ಸಂಪೂರ್ಣ ದೇಹನಿರ್ಮಾಣಕ್ಕೂ ಬಳಕೆಯಾಗಬಲ್ಲದು. ಈಗ ವಿಜ್ಞಾನ ಆಧಾರಿತ ಸಿನಿಮಾಗಳಲ್ಲಿ ನಾವು ನೋಡುತ್ತಿರುವ ಮಾನವನನ್ನು ಸಂಪೂರ್ಣವಾಗಿ ಹೋಲುವ ರೋಬೋಟ್‌ಗಳನ್ನು ನಮ್ಮ ನಡುವೆಯೇ ಕಾಣುವ ದಿನಗಳು ತೀರಾ ದೂರವೇನಲ್ಲ' ಎಂದು ಡಾ. ರಾಬರ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries