ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ವಿಮಾನ ನಿಲ್ದಾಣದ ಮೊದಲ ಹಂತವನ್ನು ₹1450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ.
ಅಯೋಧ್ಯೆ- ಬೆಂಗಳೂರು ನಡುವೆ ನೇರ ವಿಮಾನ ಸಂಚಾರ ಜ.17ರಿಂದ
ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಅಯೋಧ್ಯೆಯಿಂದ ಬೆಂಗಳೂರು ಮತ್ತು ಕೋಲ್ಕತ್ತ ನಗರಗಳಿಗೆ ಜ.17ರಿಂದ ನೇರ ವಿಮಾನ ಸೇವೆ ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಯೋಧ್ಯೆ- ನವದೆಹಲಿ ಮಾರ್ಗದಲ್ಲಿ ವಿಮಾನ ಸೇವೆ ಆರಂಭವಾಗಲಿದೆ ಎಂದು ಏರ್ ಇಂಡಿಯಾ ಈ ಹಿಂದೆಯೇ ಪ್ರಕಟಿಸಿದ್ದು, ಈ ಮಾರ್ಗದಲ್ಲಿ ವಿಮಾನ ಸಂಚಾರಕ್ಕೆ ಈಚೆಗೆ ಚಾಲನೆ ಲಭಿಸಲಿದೆ.
8 ರೈಲುಗಳಿಗೆ ಚಾಲನೆ ನೀಡಿದ ಪಿಎಂ ಮೋದಿ
ಅಯೋಧ್ಯೆ: ಮರುಅಭಿವೃದ್ಧಿಗೊಂಡಿರುವ ಅಯೋಧ್ಯ ಧಾಮ ರೈಲು ನಿಲ್ದಾಣವನ್ನು ಇಂದು ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎರಡು ಅಮೃತ ಭಾರತ್ ಮತ್ತು ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ರೈಲು ನಿಲ್ದಾಣ ಉದ್ಘಾಟನೆಗೂ ಮುನ್ನ ಪ್ರಧಾನಿ ಅವರು ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ನೆರೆದ ಸಾವಿರಾರು ಜನರು ಅವರಿಗೆ ಸ್ವಾಗತ ಕೋರಿದ್ದಾರೆ.