ಲಖನೌ: ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂಬ ಪಕ್ಷದ ಆಗ್ರಹವನ್ನು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲೂ ಪುನರುಚ್ಚರಿಸಿದ್ದಾರೆ. ಈ ಕುರಿತು ದುರ್ಬಲ ವರ್ಗಗಳ ಜನರಲ್ಲಿ ಜಾಗೃತಿ ಮೂಡಿರುವುದು ಆಡಳಿತಾರೂಢ ಬಿಜೆಪಿಯ ನಿದ್ದೆಗೆಡಿಸಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು 'ಎಕ್ಸ್' ವೇದಿಕೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, 'ಕೆಲವು ರಾಜ್ಯ ಸರ್ಕಾರಗಳು ಅರೆ ಮನಸ್ಸಿನಿಂದ ಜನರ ಭಾವನೆಗಳನ್ನು ಸಂತುಷ್ಟಗೊಳಿಸಲು ಯತ್ನಿಸುತ್ತಿವೆ. ಆದರೆ, ರಾಷ್ಟ್ರೀಯ ಹಂತದಲ್ಲಿ ಜಾತಿಗಣತಿ ನಡೆದಾಗ ಮಾತ್ರವೇ ಇದಕ್ಕೆ ನಿಜವಾದ ಪರಿಹಾರ ಸಿಗಲಿದೆ' ಎಂದು ಹೇಳಿದ್ದಾರೆ.
'ಸಂಸತ್ತಿನ ಅಧಿವೇಶನ ಡಿ. 4ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಬಿಎಸ್‌ಪಿಯು ದೇಶದಲ್ಲಿ ಜಾತಿಗಣತಿ ನಡೆಸಬೇಕು ಎಂದು ಒತ್ತಾಯಿಸಿದೆ. ದೇಶದ ಮೂಲೆ ಮೂಲೆಯಿಂದಲೂ ಇದೇ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು' ಎಂದು ಮಾಯಾವತಿ ಆಗ್ರಹಿಸಿದ್ದಾರೆ.
'ಹಣದುಬ್ಬರ, ಬಡತನ, ನಿರುದ್ಯೋಗ, ಕಳಪೆ ರಸ್ತೆ, ನೀರು, ವಿದ್ಯುತ್, ಶಿಕ್ಷಣ, ಆರೋಗ್ಯದಿಂದ ವಂಚಿತವಾಗಿರುವ ದೇಶದ ಜನರು ಮತ್ತು ಜಾತಿಯಿಂದಾಗಿ ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳ ಜನರಲ್ಲಿನ ಜಾತಿಗಣತಿ ಜಾಗೃತಿ ಕಂಡು ಬಿಜೆಪಿ ನಿದ್ದೆಗೆಟ್ಟಿದ್ದರೆ, ಕಾಂಗ್ರೆಸ್ ತನ್ನ ತಪ್ಪುಗಳನ್ನು ಮರೆಮಾಚುವಲ್ಲಿ ನಿರತವಾಗಿದೆ' ಎಂದು ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.