ಕುಂಬಳೆ: ಶೌಚಗೃಹದಲ್ಲಿ ಬಿದ್ದು ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಆಸ್ಪತ್ರೆ ಅಧಿಕಾರಿಗಳು ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಉಪ್ಪಳದ ಫಿರ್ದೌಸ್ ನಗರದ ಇಬ್ರಾಹಿಂ (64) ಎಂಬವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಉಪ್ಪಳದ ಡಾಕ್ಟರ್ಸ್ ಆಸ್ಪತ್ರೆ ವಿರುದ್ಧ ಕುಟುಂಬ ಸದಸ್ಯರು ಆರೋಪ ಮಾಡಿ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸೇವಾ ತತ್ಪರತೆಯನ್ನು ಪ್ರಶ್ನಿಸಿದ್ದಾರೆ.
ನವೆಂಬರ್. 21ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ವಯೋವೃದ್ದರಾದ ಇಬ್ರಾಹಿಂ ಶೌಚಗೃಹದಲ್ಲಿ ಬಿದ್ದು ಗಂಭೀರ ಗಾಯವಾಗಿದ್ದು, ಅವರ ಪತ್ನಿ ಅಕ್ತಾರಿ ಬಾನು ಹಾಗೂ ಮಕ್ಕಳಾದ ಸಫಾ, ಮೊಹಮ್ಮದ್ ಶಾಹಿಲ್ ಮತ್ತು ಮೊಹಮ್ಮದ್ ಶಹಬಾಜ್ ಅವರೊಂದಿಗೆ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವ್ಹೀಲ್‍ಚೇರ್‍ನಲ್ಲಿ ಕ್ಯಾಶುವಾಲಿಟಿಗೆ ತೆರಳಿದ್ದ ಇಬ್ರಾಹಿಂ ಅವರನ್ನು ಅರ್ಧ ಗಂಟೆ ಕಳೆದರೂ ವೈದ್ಯರು ಬಂದು ಪರೀಕ್ಷಿಸಿರಲಿಲ್ಲ ಎಂದು ದೂರಲಾಗಿದೆ. ವೈದ್ಯರು ಎಲ್ಲಿದ್ದಾರೆ ಎಂದು ಇತರ ಸಿಬ್ಬಂದಿಗಳನ್ನು ವಿಚಾರಿಸಿದಾಗ ಸಿಬ್ಬಂದಿಗಳು ಈಗ ಬರುತ್ತೇನೆ ಎಂದು ಉತ್ತರಿಸಿದ್ದು, ಮತ್ತೆ ಕೇಳಿದಾಗ ಅವರು ಮಲಗಿದ್ದರು. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸ್ಥಾಪಿಸಲಾಗಿರುವ ಈ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಂದ ರೋಗಿಯ ದಾರುಣಾವಸ್ಥೆ ಮತ್ತು ಆಸ್ಪತ್ರೆ ಸಿಬ್ಬಂದಿಗಳ ನಿರಾಸಕ್ತಿಯ ದೃಶ್ಯಗಳನ್ನು ಕುಟುಂಬದವರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ತೆಗೆದದ್ದನ್ನು ಗುರಿಯಾಗಿಸಿ ಬಳಿಕ ಆಸ್ಪತ್ರೆಯ ಅಧಿಕೃತರು ರೋಗಿಯ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಆಸ್ಪತ್ರೆಯ ಲೋಪವನ್ನು ಎತ್ತಿತೋರಿಸಲು ಪೋಲೀಸರಿಗೆ ದೂರು ನೀಡಲಾಗಿದೆ ಎಂದು ಕುಟುಂಬಸ್ಥರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸ್ಪತ್ರೆ ಅಧಿಕಾರಿಗಳು ಸಕಾಲದಲ್ಲಿ ಚಿಕಿತ್ಸೆ ನೀಡದ ಕಾರಣ ಗಾಯಾಳುವಿನ ಸ್ಥಿತಿ ಹದಗೆಟ್ಟಿದೆ ಎಂದು ಇಬ್ರಾಹಿಂ ಮಕ್ಕಳು ಆರೋಪಿಸಿದ್ದಾರೆ. ಇಬ್ರಾಹಿಂ ಅವರನ್ನು ಕುಂಬಳೆ ಆಸ್ಪತ್ರೆಗೆ ಕರೆದೊಯ್ದು ತುರ್ತು ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಅವರ ಮಕ್ಕಳಾದ ಸಫಾ, ಮಹಮ್ಮದ್ ಶಾಹಿಲ್ ಮತ್ತು ಮುಹಮ್ಮದ್ ಶಹಬಾಜ್ ಉಪಸ್ಥಿತರಿದ್ದರು.