ಜೈಪುರ: 'ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಸಂಸದೀಯ ಮಂಡಳಿಯು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ' ಎಂದು ರಾಜಸ್ಥಾನ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ಹೇಳಿದರು.
ಅರುಣ್ ಸಿಂಗ್ ಅವರು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿ.ಪಿ. ಜೋಶಿ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದರು. ಬಳಿಕ ಅವರಿಬ್ಬರೂ ಮತ್ತು ಕೆಲ ಶಾಸಕರು ಬಿಜೆಪಿ ಕಚೇರಿಗೆ ತೆರಳಿದರು.
ಇದೇ ವೇಳೆ, ಹೊಸದಾಗಿ ಆಯ್ಕೆ ಆಗಿರುವ ಶಾಸಕರು ಪಕ್ಷದ ಹಿರಿಯ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಭೇಟಿ ಆಗುತ್ತಿದ್ದಾರೆ. ಸೋಮವಾರದಿಂದ ಈಚೆಗೆ ಸುಮಾರು 50 ಶಾಸಕರು ರಾಜೇ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವ ಪ್ರಮುಖರಲ್ಲಿ ರಾಜೇ ಕೂಡಾ ಒಬ್ಬರು. ಹೀಗಾಗಿ ಹೊರನೋಟಕ್ಕೆ ಇದು ಬಲಪ್ರದರ್ಶನದಂತೆಯೇ ಕಾಣುತ್ತದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಕೆಲ ಶಾಸಕರು ಈ ಭೇಟಿಯನ್ನು ಸೌಜನ್ಯಪೂರ್ವಕ ಭೇಟಿ ಎಂದು ಕರೆದಿದ್ದಾರೆ. ಜೊತೆಗೆ, ರಾಜೇ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂಬ ಸುಳಿವನ್ನೂ ನೀಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಮತ್ತು ವಸುಂಧರಾ ರಾಜೇ ಅವರ ಉತ್ತಮ ಕೆಲಸಗಳಿಂದಾಗಿಯೇ ರಾಜಸ್ಥಾನದಲ್ಲಿ ಬಿಜೆಪಿಯು ಅಧಿಕಾರಕ್ಕೆ ಮರಳಿದ್ದು' ಎಂದು ನಾಸಿರಾಬಾದ್ ಶಾಸಕ ರಾಮ್‌ಸ್ವರೂಪ್ ಲಂಬಾ ಹೇಳುತ್ತಾರೆ. ರಾಜೇ ಅವರು ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲವಿದೆಯೇ ಎಂಬ ಪ್ರಶ್ನೆಗೆ, ಶಾಸಕರು ರಾಜೇ ಜೊತೆ ಇದ್ದಾರೆ ಎಂದು ಉತ್ತರಿಸಿದರು.
ರಾಜೇ ಅವರು 2003ರಿಂದ 2008ರ ಅವಧಿಗೆ ಮತ್ತು 2013ರಿಂದ 2018ರ ಅವಧಿಗೆ ಮುಖ್ಯಮಂತ್ರಿ ಆಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಅವರನ್ನು ಮರೆಗೆ ಸರಿಸಲಾಗಿತ್ತು. ಈ ಬಾರಿ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನು ಬಿಂಬಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣಾ ಪ್ರಚಾರವನ್ನು ಮುನ್ನಡೆಸಿದ್ದರು.