ನವದೆಹಲಿ: ಉಕ್ರೇನ್ ಸಂಘರ್ಷದ ನಡುವೆ ರಷ್ಯಾದ ಅಗ್ಗದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರಿಂದ ಖಾಸಗಿ ತೈಲ ಕಂಪನಿಗಳು ಎಷ್ಟು ಲಾಭ ಗಳಿಸಿವೆ ಎಂದು ಕೇಳಿದ ನಂತರ ಜವಾಹರ್ ಸಿರ್ಕಾರ್ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನಡುವೆ ಸೋಮವಾರ ರಾಜ್ಯಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ, ಈ ಹಿಂದೆ ಈ ವಿಷಯದ ಬಗ್ಗೆ ಸದಸ್ಯರ ನಡುವೆ ವಿನಿಮಯವಾದ ಪತ್ರಗಳನ್ನು ಮಂಡಿಸಲು ಸದಸ್ಯರಿಗೆ ಸೂಚಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ, ಅಗ್ಗದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಎರಡು ಖಾಸಗಿ ತೈಲ ಕಂಪನಿಗಳು ಎಷ್ಟು ಲಾಭ ಗಳಿಸಿವೆ ಎಂದು ಸರ್ಕಾರ್ ಕೇಳಿದರು. ಇದಕ್ಕೆ ಉತ್ತರಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಪುರಿ, ಟಿಎಂಸಿ ಸಂಸದರು ತಮಗೆ ಹಲವಾರು ಪತ್ರಗಳನ್ನು ಬರೆದಿದ್ದಾರೆ ಮತ್ತು ಪ್ರತಿ ಪತ್ರದಲ್ಲಿ ಅವರು ಅದೇ ಪ್ರಶ್ನೆಯನ್ನು ಕೇಳಿದ್ದಾರೆ ಎಂದು ಹೇಳಿದರು.
ಸಿರ್ಕಾರ್ ಅವರ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ ಮತ್ತು ಅವರೊಂದಿಗಿನ ಪತ್ರ ವಿನಿಮಯದ ದಾಖಲೆಯನ್ನು ಸಾರ್ವಜನಿಕಗೊಳಿಸಲು ಸಿದ್ಧನಾಗಿದ್ದೇನೆ ಎಂದು ಪುರಿ ಹೇಳಿದರು. ಇದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇಬ್ಬರ ನಡುವಿನ ದಾಖಲೆಯನ್ನು ಸದನದಲ್ಲಿ ಮಂಡಿಸುವಂತೆ ಸಭಾಪತಿ ಜಗದೀಪ್ ಧನಕರ್ ಹೇಳಿದರು.
ಸಾರ್ವಜನಿಕ ವಲಯದ ತೈಲ ಕಂಪನಿಗಳು ದೀರ್ಘಾವಧಿಯ ಒಪ್ಪಂದಗಳಿಗೆ ಬದ್ಧವಾಗಿರುವುದರಿಂದ ರಷ್ಯಾದಿಂದ ಅಗ್ಗದ ತೈಲದ ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ ಎರಡು ಖಾಸಗಿ ತೈಲ ಕಂಪನಿಗಳು ಅಗ್ಗದ ಬೆಲೆಗೆ ತೈಲವನ್ನು ಖರೀದಿಸುವ ಮೂಲಕ ಭಾರೀ ಲಾಭ ಗಳಿಸಿವೆ ಎಂದು ಸಿರ್ಕಾರ್ ಆರೋಪಿಸಿದ್ದಾರೆ.