ಗಾಜಾ ಪಟ್ಟಿ, ರಫಾ: 'ನಮ್ಮ ಬೇಡಿಕೆಗಳು ಈಡೇರದೆ ಒಬ್ಬ ಒತ್ತೆಯಾಳು ಕೂಡ ಇಸ್ರೇಲ್‌ಗೆ ಜೀವಂತವಾಗಿ ಮರಳುವುದಿಲ್ಲ' ಎಂದು ಹಮಾಸ್ ಬಂಡುಕೋರರು ಬೆದರಿಕೆಯೊಡ್ಡಿದ ಬೆನ್ನಲ್ಲೇ ಇಸ್ರೇಲ್ ಸೇನೆಯು ದಕ್ಷಿಣ ಗಾಜಾದ ಮೇಲೆ ಭಾನುವಾರ ರಾತ್ರಿಯಿಂದಲೇ ಬಾಂಬ್ ದಾಳಿ ತೀವ್ರಗೊಳಿಸಿದೆ.
ಗಾಜಾದ ದಕ್ಷಿಣಕ್ಕಿರುವ ಅತಿದೊಡ್ಡ ನಗರ ಖಾನ್ ಯೂನಿಸ್ ಮೇಲೆ ಭಾನುವಾರ ರಾತ್ರೊರಾತ್ರಿ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿ, ಬಾಂಬ್‌ಗಳ ಸುರಿಮಳೆಗರೆದಿದೆ. ಇದೇ ವೇಳೆ, ಗಾಜಾದ ಕೇಂದ್ರ ಮತ್ತು ಉತ್ತರದ ನಗರ ಪ್ರದೇಶದ ಮೇಲೂ ಭಾರಿ ದಾಳಿಯಾಗಿದೆ ಎಂದು 'ಎಎಫ್‌ಪಿ' ಪ್ರತಿನಿಧಿ ವರದಿ ಮಾಡಿದ್ದಾರೆ.
ದಕ್ಷಿಣದಲ್ಲಿರುವ ರಫಾ ನಗರದ ಮೇಲೂ ವೈಮಾನಿಕ ದಾಳಿಯಾಗಿದೆ. ಗಾಜಾ ನಗರದಿಂದ ಸುರಕ್ಷತೆ ಬಯಸಿ ಜನರು ರಫಾಕ್ಕೆ ಓಡಿಹೋಗಿದ್ದರು. ಆದರೆ, ಬಾಂಬ್ ದಾಳಿಯಲ್ಲಿ ಏಳು ಮಕ್ಕಳು ಸತ್ತಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ನಿವಾಸಿ ಉಮ್ ಮೊಹಮ್ಮದ್ ಅಲ್ ಜಬ್ರಿ ಹೇಳಿದ್ದಾರೆ.
ಗಾಜಾದ ಪ್ರಮುಖ ಎರಡು ದೊಡ್ಡ ನಗರಗಳಲ್ಲಿ ಇಸ್ರೇಲ್ ಪಡೆಗಳು ಮತ್ತು ಹಮಾಸ್ ಬಂಡುಕೋರರ ನಡುವೆ ಸೋಮವಾರ ತೀವ್ರ ಕಾಳಗ ನಡೆಯಿತು. ಇಸ್ರೇಲ್ ಪಡೆಗಳು ಮುತ್ತಿಗೆ ಹಾಕಿರುವ ಪ್ರದೇಶಗಳಿಂದ ಭಾರಿ ಸಂಖ್ಯೆಯಲ್ಲಿ ನಾಗರಿಕರ ಸ್ಥಳಾಂತರ ನಡೆದ ನಂತರವೂ ಹಲವು ಕಡೆಗಳಲ್ಲಿ ನಾಗರಿಕರು ಸಿಲುಕಿಕೊಂಡಿದ್ದಾರೆ.
ಇಸ್ರೇಲ್ ಭೂಸೇನಾ ಪಡೆಗಳು ಕಳೆದ ವಾರ ಹೊಸ ದಾಳಿ ಆರಂಭಿಸಿದ ಮೇಲೆ ಖಾನ್ ಯೂನಿಸ್ ನಗರ ಮತ್ತು ಸುತ್ತಮುತ್ತ ಭಾರಿ ಹೋರಾಟಗಳು ನಡೆಯುತ್ತಿವೆ. ಗಾಜಾ ನಗರದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಗಾಜಾದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಇನ್ನೂ ಯುದ್ಧ ನಡೆಯುತ್ತಲೇ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸುರಂಗದ ದ್ವಾರ ಶೋಧಿಸುತ್ತಿದ್ದ ಇಸ್ರೇಲ್ ಸೈನಿಕರನ್ನು ಗುರಿಯಾಗಿಸಿ ಖಾನ್ ಯೂನಿಸ್‌ನಲ್ಲಿ ಮನೆಯೊಂದನ್ನು ಸ್ಫೋಟಿಸಿರುವುದಾಗಿ ಹಮಾಸ್ ಬಂಡುಕೋರರು ಹೇಳಿಕೊಂಡಿದ್ದಾರೆ.
ಗಾಜಾ ಮೇಲೆ ಭೂದಾಳಿ ಆರಂಭವಾದಾಗಿನಿಂದ ಈವರೆಗೆ ಇಸ್ರೇಲ್‌ನ 101 ಸೈನಿಕರು ಸಾವನ್ನಪ್ಪಿದ್ದಾರೆ. ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ, ಗುಂಡು ಹಾರಿಸುವುದನ್ನು ಮುಂದುವರಿಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ದಕ್ಷಿಣ ಗಾಜಾ ಕೇಂದ್ರಿತ ಹೋರಾಟದಲ್ಲಿ ಸೇನೆಯು ಸುಮಾರು 7,000 ಬಂಡುಕೋರರನ್ನು ಕೊಂದಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿಕೊಂಡ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಬಂಡುಕೋರರ ಗುಂಪಿಗೆ 'ಈಗ ಶರಣಾಗತಿ'ಯೊಂದೇ ಉಳಿದಿರುವ ಮಾರ್ಗ. ಇದು ಹಮಾಸ್‌ನ ಅಂತ್ಯದ ಶರು. ಸಿನ್ವಾರ್‌ಗಾಗಿ ಸಾಯಬೇಡಿ ಎಂದು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಮುಖ್ಯಸ್ಥರ ಸಿನ್ವರ್ ಹೆಸರು ಉಲ್ಲೇಖಿಸಿ, ಬಂಡುಕೋರರಿಗೆ ಕರೆ ಕೊಟ್ಟಿದ್ದಾರೆ.
ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧದಲ್ಲಿ ಈವರೆಗೆ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 18 ಸಾವಿರಕ್ಕೆ ತಲುಪಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.