ಮೀರಠ್: 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಪ್ರಕರಣದ ಮುಖ್ಯ ಸಾಕ್ಷಿದಾರನಾಗಿದ್ದ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣ ಸಂಬಂಧ ಇತ್ತೀಚೆಗೆ ಗುಂಡೇಟಿನಿಂದ ಹತ್ಯೆಗೀಡಾದ ಪಾತಕಿ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಸೋದರಿ ಮತ್ತು ಆಕೆಯ ಪತಿ ಅಖ್ಲಾಕ್‌ಗೆ ಸೇರಿದ ಮನೆಯನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಯಾಗ್‌ರಾಜ್‌ನ ಧೂಮನ್‌ಗಂಜ್ ಠಾಣೆ ಪೊಲೀಸರು, ನೌಚಾಂದ್‌ನ ಭವನಿ ನಗರದಲ್ಲಿರುವ ಎರಡು ಮಹಡಿಯ ಮನೆಯನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರುವರಿ 24ರಂದು ಪ್ರಯಾಗ್‌ರಾಜ್‌ನಲ್ಲಿ ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಉಮೇಶ್ ಪಾಲ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಅಹ್ಮದ್, ಆತನ ಸಹೋದರ ಆಶ್ರಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಹ ಆರೋಪಿಗಳೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಮೇಶ್ ಪಾಲ್ ಅವರ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಗುಡ್ಡು ಮುಸ್ಲಿಂಗೆ ಅಖ್ಲಾಕ್ ಆರ್ಥಿಕ ಸಹಾಯದ ಜೊತೆಗೆ ತಮ್ಮ ಮನೆಯಲ್ಲೇ ಉಳಿಯಲು ಜಾಗ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಪಡೆಯು ಅಖ್ಲಾಕ್‌ನನ್ನು ಬಂಧಿಸಿದೆ. ಆದರೆ, ನೂರಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ.