HEALTH TIPS

ಮಸೂದೆಯಿಂದ ಚುನಾವಣಾ ಆಯುಕ್ತರ ನೇಮಕಾತಿಯಾದರೆ, ನ್ಯಾಯಸಮ್ಮತ ಚುನಾವಣೆ ಅಸಾಧ್ಯ: ಕಳವಳ ವ್ಯಕ್ತಪಡಿಸಿದ ನ್ಯಾ. ನಾರಿಮನ್

                ಮುಂಬೈ : "ಚುನಾವಣಾ ಆಯುಕ್ತರ ನೇಮಕಾತಿ ಸೇರಿದಂತೆ ಸೇವಾ ನಿಯಮಗಳ ಮೇಲೆ ನಿಯಂತ್ರಣ ಹೇರಲು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಸೂದೆಯು ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಗಂಭೀರ ಅಪಾಯಕ್ಕೆ ದೂಡಬಹುದು"̧ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಆತಂಕ ವ್ಯಕ್ತಪಡಿಸಿದ್ದಾರೆ.

              ಮುಂಬೈನ ಏಷ್ಯಾಟಿಕ್‌ ಸೊಸೈಟಿ ತನ್ನ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ಬನ್ಸಾರಿ ಸೇಠ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಭಾರತದ ಸಂವಿಧಾನ: ತಡೆ ಮತ್ತು ಸಮತೋಲನ" ಕುರಿತು ಅವರು ಮಾತನಾಡಿದರು. "ಮಸೂದೆಯು ಕಾಯ್ದೆಯಾದರೆ, ಚುನಾವಣಾ ಆಯುಕ್ತರನ್ನು ನೇಮಕ ಮಾಡುವಾಗ ಕಾರ್ಯಾಂಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದ್ದಾರೆ.

                  "ಚುನಾವಣಾ ಆಯುಕ್ತರನ್ನು ಈ ರೀತಿ ನೇಮಿಸಲು ಹೊರಟರೆ, ನ್ಯಾಯಸಮ್ಮತ ಚುನಾವಣೆಗಳು ಮರೀಚಿಕೆಯಾಗಲಿವೆ. ಈ ಮಸೂದೆ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಕಾನೂನಾಗಿದ್ದು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಅದನ್ನು ರದ್ದುಗೊಳಿಸಬಹುದು. ಕಾಯ್ದೆಯಾಗಲಿರುವ ಮಸೂದೆಯನ್ನು ರದ್ದುಗೊಳಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಕಾದಿದೆ. ಇದನ್ನು ನಿರಂಕುಶ ಕಾಯ್ದೆಯೆಂದು ಪರಿಗಣಿಸಿ ರದ್ದುಗೊಳಿಸಬೇಕು. ಮಸೂದೆಯು ಸುಪ್ರೀಂ ಕೋರ್ಟ್ ಸೂಚಿಸಿದ್ದಕ್ಕಿಂತ ಭಿನ್ನವಾಗಿದೆ. ರಾಜ್ಯಸಭೆಯಲ್ಲಿ ಅಂಗೀಕೃತವಾಗಿ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿರುವ ಮಸೂದೆ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವಂತಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಏನಿದು ಮಸೂದೆ?

                 ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ, 2023 ಅನ್ನು ಡಿಸೆಂಬರ್ 12 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಹಿಂದೆ ಮಾರ್ಚ್‌ 22, 2023ರಂದು ಚುನಾವಣಾ ಆಯುಕ್ತರ ನೇಮಕಾತಿಯನ್ನು ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ, ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ನೂತನ ಮಸೂದೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅವರನ್ನು ಸಮಿತಿಯಿಂದ ಕೈಬಿಡಲಾಗಿದ್ದು, ಆ ಸ್ಥಾನದಲ್ಲಿ ಕೇಂದ್ರ ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries