ಕಾಸರಗೋಡು : ಮೈಸೂರಿನಲ್ಲಿ ಚಿನ್ನ ಮಾರಾಟಮಾಡಿ ಕಾರಿನಲ್ಲಿ ಆಗಮಿಸುತ್ತಿದ್ದ ಗುತ್ತಿಗೆದಾರ ಹಾಗೂ ಈತನ ಸ್ನೇಹಿತನನ್ನು ಅಪಹರಿಸಿ ಹಣ ದರೋಡೆ ನಡೆಸಲಾಗಿದ್ದು, ಪ್ರಕರಣದ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿಸಲಾಗಿದೆ.
ಮಲಪ್ಪುರಂ ತಿರೂರಂಗಾಡಿ ನಿವಾಸಿ, ಗುತ್ತಿಗೆದರ ಕೆ. ಶಂಜಾದ್ ಹಾಗೂ ಈತನ ಸ್ನೇಹಿತ, ವಿದ್ಯಾರ್ಥಿ ಅಪ್ಪು ದರೋಡೆಗೀಡಾದವರು. ಗುತ್ತಿಗೆದಾರ ಶಂಜಾದ್ ತನ್ನ ಬಳಿಯಿದ್ದ 750ಗ್ರಾಂ ಚಿನ್ನವನ್ನು ಮೈಸೂರಿನಲ್ಲಿ ಮಾರಾಟಮಾಡಿ, ಕಾರಿನಲ್ಲಿ ವಾಪಸಾಗುತ್ತಿದ್ದ ಸಂದರ್ಭ ಘಟನೆ. ಭದ್ರಗೋಳಿ ಎಂಬಲ್ಲಿ ರಸ್ತೆಬದಿ ಲಾರಿ ನಿಲುಗಡೆಗೊಳಿಸಿದ್ದ ಹಿನ್ನೆಲೆಯಲ್ಲಿ ಕಾರಿನ ವೇಗ ಕಡಿಮೆ ಮಾಡುತ್ತಿದ್ದಂತೆ 15ರಷ್ಟು ಮಂದಿಯಿದ್ದ ತಂಡವೊಂದು ಹಣ ನೀಡುವಂತೆ ಬೆದರಿಕೆ ಹಾಕಿದೆ. ಹಣ ನಿಡದಿದ್ದಾಗ, ಕಾರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆನಡೆಸಿ ಹಣ ಕಸಿದು ತೆಗೆದು, ತಂಡ ತಮ್ಮ ಕಾರಿನಲ್ಲಿ ಪರಾರಿಯಾಗಿದೆ. ಅಪರಿಚಿತ ಹಾಗೂ ಕತ್ತಲಿನಿಂದ ಕೂಡಿದ ಸ್ಥಳದಬಗ್ಗೆ ಮಾಹಿತಿಯಿಲ್ಲದೆ ಸುಮಾರು ಒಂದುವರೆ ಕಿ.ಮೀ ದೂರ ನಡೆದು ಪತ್ರಿಕೆ ಸಾಗಾಟದ ವಾಹನದಲ್ಲಿ ವಿರಜ್‍ಪೇಟೆ ಠಾಣೆಗೆ ತೆರಳಿ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಕೊಳತ್ತೋಡು ಎಂಬಲ್ಲಿಂದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರು ಹಾನಿಗೀಡಾದ ಸ್ಥಿತಿಯಲ್ಲಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯನ್ನು ಕಣ್ಣೂರು, ಕಾಸರಗೋಡಿಗೂ ವಿಸ್ತರಿಸಿದ್ದಾರೆ.