HEALTH TIPS

ಅತ್ಯಾಧುನಿಕ ಯುದ್ಧ ನೌಕೆ ಐಎನ್‌ಎಸ್‌ ಇಂಫಾಲ್‌ ನಿಯೋಜನೆ

                ಮುಂಬೈ: ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ, ಕ್ಷಿಪಣಿ ವಿಧ್ವಂಸಕ ಅತ್ಯಾಧುನಿಕ ಯುದ್ಧ ನೌಕೆ 'ಐಎನ್‌ಎಸ್‌ ಇಂಫಾಲ್‌' ಅನ್ನು ಮಂಗಳವಾರ ಕರ್ತವ್ಯಕ್ಕೆ ನಿಯೋಜಿಸಲಾಯಿತು.

                ಸೂಪರ್‌ಸಾನಿಕ್‌ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ನೌಕೆಯನ್ನು ನೌಕಾಪಡೆಯ ಪಶ್ಚಿಮ ಕಮಾಂಡ್‌ಗೆ ಸೇರ್ಪಡೆಗೊಳಿಸಲು ಮುಂಬೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿ ಕುಮಾರ್‌ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪಾಲ್ಗೊಂಡರು.

               ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಈಶಾನ್ಯ ರಾಜ್ಯದ ನಗರವೊಂದರ ಹೆಸರು ಇಟ್ಟಿರುವುದು ಇದೇ ಮೊದಲು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಣಿಪುರದ ಜನರ ಕೊಡುಗೆ ಮತ್ತು ತ್ಯಾಗಗಳನ್ನು ಸ್ಮರಿಸಲು ಈ ಹೆಸರು ಇಡಲಾಗಿದೆ.

                  ಬಂದರು ಮತ್ತು ಸಮುದ್ರದಲ್ಲಿ ವಿವಿಧ ಹಂತಗಳಲ್ಲಿ ಸಮಗ್ರ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿದ ನೌಕೆಯನ್ನು ಅಕ್ಟೋಬರ್‌ 20 ರಂದು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.

                   'ಇದೇ ವರ್ಷ ನವೆಂಬರ್‌ನಲ್ಲಿ ಇಂಫಾಲ್‌ ನೌಕೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸ್ವದೇಶಿನಿರ್ಮಿತ ಯುದ್ಧನೌಕೆಯನ್ನು ನಿಯೋಜನೆಗೂ ಮುನ್ನ ಈ ರೀತಿಯ ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು. ನೌಕೆಯ ಸಾಮರ್ಥ್ಯದಲ್ಲಿ ನೌಕಾಪಡೆಯು ಇಟ್ಟಿರುವ ವಿಶ್ವಾಸವನ್ನು ಇದು ತೋರಿಸುತ್ತದೆ' ಎಂದು ಪ್ರಕಟಣೆ ತಿಳಿಸಿದೆ.

                     'ಐಎನ್‌ಎಸ್‌ ಇಂಫಾಲ್‌ ನೌಕೆಯು ರಕ್ಷಣಾ ಕ್ಷೇತ್ರದಲ್ಲಿ ದೇಶವು ಸ್ವಾವಲಂಬನೆ (ಆತ್ಮನಿರ್ಭರತೆ) ಸಾಧಿಸುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ನೌಕಾಪಡೆಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ' ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಒಟ್ಟು 315 ಸಿಬ್ಬಂದಿಯನ್ನು ಒಳಗೊಳ್ಳಲಿರುವ ಈ ನೌಕೆಗೆ ಕ್ಯಾಪ್ಟನ್‌ ಕೆ.ಕೆ.ಚೌಧರಿ ಅವರು ಕಮಾಂಡರ್‌ ಆಗಿದ್ದಾರೆ.

ನೌಕೆಯ ಉದ್ದ: 163 ಮೀ.

ಶೇ 75: ಸ್ವದೇಶಿ ತಂತ್ರಜ್ಞಾನ, ಉಪಕರಣ ಮತ್ತು ಬಿಡಿಭಾಗಗಳ ಬಳಕೆ

ಸಿಬ್ಬಂದಿ: 315

ನೌಕೆಯ ವಿಶೇಷತೆಗಳು

* ಭಾರತದಲ್ಲಿ ಈವರೆಗೆ ನಿರ್ಮಿಸಲಾಗಿರುವ ಪ್ರಬಲ ಯುದ್ಧ ನೌಕೆಗಳಲ್ಲಿ ಇದೂ ಒಂದು

* ಪರಮಾಣು, ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳ ದಾಳಿ ಸೇರಿದಂತೆ ಯಾವುದೇ ಯುದ್ದದ ಪರಿಸ್ಥಿತಿಯಲ್ಲೂ ಹೋರಾಡುವ ರೀತಿಯಲ್ಲಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ

* ಕ್ಷಿಪಣಿಗಳನ್ನು ನಾಶ ಮಾಡಬಲ್ಲ ವ್ಯವಸ್ಥೆ ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ

* ನೆಲದಿಂದ ನೆಲಕ್ಕೆ ಮತ್ತು ನೆಲದಿಂದ ಆಗಸಕ್ಕೆ ಉಡಾವಣೆ ಮಾಡಬಲ್ಲ ಕ್ಷಿಪಣಿಗಳನ್ನು ಒಳಗೊಂಡಿರಲಿದೆ

* ಸ್ವದೇಶಿ ನಿರ್ಮಿತ ರಾಕೆಟ್‌ ಲಾಂಚರ್‌, ಟಾರ್ಪಿಡೊ ಲಾಂಚರ್‌ಗಳು ಮತ್ತು ಜಲಾಂತರ್ಗಾಮಿ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿದೆ

'ಸಮುದ್ರದ ತಳದಲ್ಲಿದ್ದರೂ ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ'

                  ಮುಂಬೈ: ಸರಕು ಸಾಗಣೆ ಹಡಗುಗಳ ಮೇಲೆ ಈಚೆಗೆ ನಡೆದ ದಾಳಿಯ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು. 'ಎಂವಿ ಚೆಮ್‌ ಪ್ಲುಟೊ ಮತ್ತು ಎಂವಿ ಸಾಯಿಬಾಬಾ (ದಕ್ಷಿಣ ಕೆಂಪು ಸಮುದ್ರದಲ್ಲಿ) ಹಡಗುಗಳ ಮೇಲೆ ನಡೆದ ಡ್ರೋನ್‌ ದಾಳಿಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ದಾಳಿಯ ಹಿಂದಿರುವವರು ಸಾಗರದ ತಳದಲ್ಲಿದ್ದರೂ ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಸಿದರು. ಸೌದಿ ಅರೇಬಿಯಾದಿಂದ ಮಂಗಳೂರಿಗೆ ಕಚ್ಚಾ ತೈಲ ಸಾಗಿಸುತ್ತಿದ್ದ ಸರಕು ಸಾಗಣೆ ಹಡಗು ಎಂವಿ ಚೆಮ್‌ ಪ್ಲುಟೊ ಮೇಲೆ ಶನಿವಾರ ಡ್ರೋನ್‌ ದಾಳಿ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಈ ಘಟನೆಯ ಬಳಿಕ ನೌಕಾಪಡೆಯು ಸಮುದ್ರದಲ್ಲಿ ತನ್ನ ಗಸ್ತು ಹೆಚ್ಚಿಸಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿ ಕುಮಾರ್‌ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries