ಕಾಸರಗೋಡು: ಜಲ ಬಜೆಟ್ ಮೂಲಕ ಜಲ ಭದ್ರತಾ ಯೋಜನೆ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ಕಾಯಕ್ರಮ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ತರಬೇತಿ ಶಿಬಿರ ಉದ್ಘಾಟಿಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಂಟಿ ಯೋಜನಾ ಸಂಯೋಜಕ ಟಿ.ವಿ.ಅಬ್ದುಲ್ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಜಲಭದ್ರತಾ ಯೋಜನೆಗೆ ಜಲ ಬಜೆಟ್ ಕುರಿತು ನವಕೇರಳ ಕರ್ಮಪದ್ಧತಿ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಅಂತರ್ಜಲ ಪೌಷ್ಟಿಕತೆಯ ವೈಶಿಷ್ಟ್ಯತೆ ಕುರಿತು ಅಂತರ್ಜಲ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ರತೀಶ್, ನೀರಾವರಿ ಕ್ಷೇತ್ರದ ಚಟುವಟಿಕೆಗಳ ಕುರಿತು ಸಣ್ಣ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ಎ.ಪಿ.ಸುಧಾಕರನ್ ªತರಗತಿ ನಡೆಸಿದರು. ಕೃಷಿ ಇಲಾಖೆ ಉಪನಿರ್ದೇಶಕ ವಿಷ್ಣು ಎಸ್ ನಾಯರ್, ಉಪ ಯೋಜನಾಧಿಕಾರಿ ಎಂ.ಕಾಲಾಮುದ್ದೀನ್, ಮಣ್ಣು ಸಂರಕ್ಷಣಾಧಿಕಾರಿ ಕೆ.ನಾರಾಯಣನ್, ನೀರಾವರಿ ಇಲಾಖೆ ಎಂಜಿನಿಯರ್ ಅಖಿಲ್ ಮಧುಸೂದನನ್, ವಿವಿಧ ಸ್ಥಳೀಯ ಸಂಸ್ಥೆಗಳ ಯೋಜನಾ ಸಮಿತಿಯ ಉಪಾಧ್ಯಕ್ಷರು ಮತ್ತು ನೋಡಲ್ ಅಧಿಕಾರಿಗಳು ಸೇರಿದಂತೆ ತಲಾ ಮೂವರು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಕಿರಿಯ ಅಧೀಕ್ಷಕ ಇ.ಮನೋಜ್ ಕುಮಾರ್ ಸ್ವಾಗತಿಸಿದರು.
ಜಲಸಂರಕ್ಷಣೆ ಪ್ರಮುಖ ಧ್ಯೇಯ:
ಜಿಲ್ಲೆಯ ಎಲ್ಲ 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಿದ್ಧಪಡಿಸಿದ ಜಲ ಬಜೆಟ್ ಮೂಲಕ ಜಿಲ್ಲಾ ಜಲ ಭದ್ರತಾ ಯೋಜನೆ ಸಿದ್ಧಪಡಿಸುವ ಅಂಗವಾಗಿ ತರಬೇತಿ ನೀಡಲಾಯಿತು. ಜಿಲ್ಲೆಯಲ್ಲಿ ಂತರ್ಜಲ ಕೊರತೆ, ಬರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜಲ ಭದ್ರತಾ ಯೋಜನೆಯಲ್ಲಿ ಅಳವಡಿಸಬೇಕಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಇತರ ಇಲಾಖೆಯ ಯೋಜನೆಗಳು ಸಂಘಟಿತ ಚಟುವಟಿಕೆಗಳನ್ನು ಮುನ್ನಡೆಸುತ್ತವೆ.ಜಲ ಭದ್ರತಾ ಯೋಜನೆ ಮೂಲಕ ಜಿಲ್ಲೆಯಲ್ಲಿ ಅಂತರ್ಜಲದ ಅತಿಯಾದ ಬಳಕೆಯನ್ನು ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳು ಡಿಸೆಂಬರ್ 15ರೊಳಗೆ ಜಲ ಬಜೆಟ್ ವರದಿ ಹಾಗೂ ಡಿಸೆಂಬರ್ 31ರೊಳಗೆ ಜಲಸುರಕ್ಷಣಾ ಯೋಜನೆ ಸಿದ್ಧಪಡಿಸಲಾಗುವುದು.