ಶ್ರೀನಗರ: ಜಮ್ಮುವಿನ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಹಳ್ಳತಿಟ್ಟುಗಳ ಭೂಪ್ರದೇಶದಲ್ಲಿ ಸಹಜವಾಗಿರುವ ಗುಹೆಗಳು ಭದ್ರತಾಪಡೆಗಳಿಗೆ ಹೊಸ ಸವಾಲಾಗಿದ್ದು, ಉಗ್ರರ ಅಡಗುತಾಣಗಳಾಗಿರುವ ಇವುಗಳನ್ನು ಶೀಘ್ರ ನಾಶಪಡಿಸುವಂತೆ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಕಮಾಂಡರ್‌ಗಳಿಗೆ ಸೂಚಿಸಿದ್ದಾರೆ.
ಸೋಮವಾರ ಗಡಿಯ ಅವಳಿ ಜಿಲ್ಲೆಗಳಿಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವಂತೆ ಸ್ಥಳೀಯ ಕಮಾಂಡರ್‌ಗಳಿಗೆ ಸೂಚನೆ ನೀಡಿದ್ದಾರೆ. ಎಲೆ, ರೆಂಬೆಗಳ ದಟ್ಟ ಗೊಂಚಲಿನ ಕೆಳಗೆ ಯಾರಿಗೂ ಕಾಣದಂತಿರುವ ಗುಹೆಗಳನ್ನು ನಾಶ ಮಾಡುವಂತೆಯೂ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೀರ್ ಪಂಜಾಲ್ ಪರ್ವತಸಾಲು ಎಂದೇ ಹೆಸರುವಾಸಿಯಾಗಿರುವ ರಜೌರಿ- ಪೂಂಛ್‌ನ ಅರಣ್ಯ ಪ್ರದೇಶಗಳಲ್ಲಿ ಗುಹೆಗಳ ಅಡಗುತಾಣಗಳಲ್ಲಿ ಉಗ್ರರು ನೆಲೆಸಿದ್ದರು ಎಂಬ ವರದಿಗಳಿವೆ. ದಾಳಿ ನಡೆಸುವ ಮೊದಲು ಮತ್ತು ದಾಳಿ ನಡೆಸಿದ ನಂತರ ಅವರು ಇಲ್ಲಿ ಆಶ್ರಯ ಪಡೆದಿದ್ದರು. ಈ ಗುಹೆಗಳು ಸುತ್ತುಬಳಸಿದ ಹಾದಿಗಳನ್ನು ಹೊಂದಿದ್ದು ಉಗ್ರರ ಕಾರ್ಯತಂತ್ರಕ್ಕೆ ಅನುಕೂಲಕರವಾಗಿವೆ ಎನ್ನಲಾಗಿದೆ.
'ಗುಹೆಗಳ ಒಳ ಪ್ರವೇಶಿಸುವ ಮಾರ್ಗಗಳ ಪತ್ತೆಗೆ ಯತ್ನಿಸಲಾಗಿದೆ. ಕೆಲ ಸ್ಥಳೀಯರ ಬೆಂಬಲದೊಂದಿಗೆ ಆಹಾರ ಪಡೆದು ಈ ಗುಹೆಗಳನ್ನು ಆಶ್ರಯ ತಾಣವಾಗಿ ಉಗ್ರರು ಬಳಸುತ್ತಿರಬಹುದು ಎಂಬ ವರದಿಗಳಿವೆ. ಈ ಕಾರಣ ಇಲ್ಲಿ ವ್ಯಾಪಕವಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ' ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಉಗ್ರರು ಹಠಾತ್ ದಾಳಿ ನಡೆಸಿ ನಾಲ್ವರು ಯೋಧರನ್ನು ಹತ್ಯೆಗೈದ ಡೇರಾ ಕಿ ಗಲಿ ಪ್ರದೇಶವು ಗಡಿ ನಿಯಂತ್ರಣ ರೇಖೆಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ ಮತ್ತು ಪೂಂಛ್‌ನ ಬಫ್ಲಿಯಾಜ್‌ನಿಂದ ರಜೌರಿಯ ಥಾನಮಂಡಿಗೆ ಸಂಪರ್ಕ ಕಲ್ಪಿಸುತ್ತದೆ.
ಡೇರಾ ಕಿ ಗಲಿಯ ಅರಣ್ಯ ಪ್ರದೇಶದಲ್ಲಿರುವ ಗುಹೆಗಳು ಉಗ್ರರಿಗೆ ಸುರಕ್ಷಿತ ಅಡಗುತಾಣಗಳಾಗಿವೆ. ಭದ್ರತಾ ಪಡೆಗಳು ಕಳೆದ ದಶಕಗಳಿಂದಲೂ ಈ ಗುಹೆಗಳಲ್ಲಿ ಹಲವು ಅಡಗುತಾಣಗಳನ್ನು ಪತ್ತೆ ಹಚ್ಚಿವೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೋಕರ್‌ನಾಗ್ ಕಾರ್ಯಾಚರಣೆಯಲ್ಲಿ ಕರ್ನಲ್, ಮೇಜರ್ ಮತ್ತು ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು. ಉಗ್ರರ ಪತ್ತೆಗೆ ಯೋಧರು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿದ್ದನ್ನು ಭದ್ರತಾ ಪಡೆಗಳು ಅನೌಪಚಾರಿಕವಾಗಿ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ತೋರಿಸಲಾಗಿತ್ತು.
ಗುಹೆಗಳಂತಹ ಉಗ್ರರ ಅಡಗುತಾಣಗಳನ್ನು ನಾಶಪಡಿಸಲು ಭದ್ರತಾ ಪಡೆಗಳು ಮಾರ್ಟರ್‌ಗಳು, ರಾಕೆಟ್‌ಗಳು ಮತ್ತು ಮಷಿನ್‌ಗನ್‌ಗಳನ್ನು ವ್ಯಾಪಕವಾಗಿ ಬಳಸಿದ್ದವು.