ಕಾಸರಗೋಡು: ಬೇಕಲದಲ್ಲಿ ಡಿಸೆಂಬರ್ 22ರಿಂದ 31ರವರೆಗೆ ನಡೆಯಲಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟಿವಲ್ ಎರಡನೇ ಆವೃತ್ತಿಯ ಯಶಸ್ಸಿಗಾಗಿ ರೈಲ್ವೆ ಭೂಮಿಯನ್ನು ವಾಹನ ಪಾಕಿರ್ಂಗ್‍ಗೆ ಒದಗಿಸಿಕೊಡುವುದರ ಜತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗೀಯ ಪ್ರಬಂದಕ ಅರುಣ್ ಕುಮಾರ್ ಚತುರ್ವೇದಿ ಸಂಘಟನಾ ಸಮಿತಿಯ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಬೇಕಲ್ ಫೆಸ್ಟ್ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಸಿ.ಎಚ್.ಕುಂಜಂಬು ಅವರು ವಿಭಾಗೀಯ ಪ್ರಬಂದಕರ ಜತೆ ನಡೆಸಿದ ಚರ್ಚೆಯಲ್ಲಿ ಈ ಬಗ್ಗೆ ಖಾತ್ರಿ ನೀಡಲಾಗಿದೆ. ಬೇಕಲ್ ರೈಲ್ವೆ ಸ್ಟೇಷನ್ ಬಳಿಯಿರುವ ರೈಲ್ವೆ ಇಲಾಖೆಯ ಖಾಲಿ ಭೂಮಿಯನ್ನು ಸಂಪೂರ್ಣವಾಗಿ ವಾಹನ ಪಾಕಿರ್ಂಗ್ ವ್ಯವಸ್ಥೆಗೆ ನೀಡಲಾಗುವುದು. ಫೆಸ್ಟ್‍ನ ದಿನಗಳಲ್ಲಿ ರೈಲುಗಳು ಈ ಪ್ರದೇಶದಲ್ಲಿ ನಿಧಾನಗತಿಯಿಂದ ಮತ್ತು ವಿಸಿಲ್ ವಾರ್ನಿಂಗ್‍ನೊಂದಿಗೆ ಸಂಚರಿಸಲಿದೆ. ಕೆಲವು ರೈಲುಗಳಿಗೆ ಬೇಕಲದಲ್ಲಿ ಹೆಚ್ಚುವರಿ ನಿಲುಗಡೆ ಒದಗಿಸುವ ನಿಟ್ಟಿನಲ್ಲಿ ದ. ರೈಲ್ವೆ ಜನರಲ್ ಮೆನೇಜರ್ ಅವರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವುದು. ಫೆಸ್ಟಿವಲ್ ವೀಕ್ಷಿಸಲು ಬರುವವರು ರೈಲ್ವೇ ಕಾಲುಸೇತುವೆಯನ್ನೂ ಬಳಸಬಹುದಾಗಿದೆ. ಆದರೆ, ಅಕ್ರಮವಾಗಿ ರೈಲ್ವೆ ಹಳಿಗಳನ್ನು ದಾಟದಂತೆ ಮತ್ತು ಈ ಕಾರ್ಯಗಳಿಗೆ ಅನುಮೋದಿತ ಮಾರ್ಗಗಳನ್ನು ಬಳಸುವಮತೆ ಅರುಣ್ ಕುಮಾರ್ ಚತುರ್ವೇದಿ ಮಾಹಿತಿ ನೀಡಿದರು. ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿ.ಆರ್.ಡಿ.ಸಿ ಮ್ಯಾನೇಜಿಂಗ್ ಡೈರೆಕ್ಟರ್ ಶಿಜಿನ್ ಪರಂಬತ್ ಉಪಸ್ಥಿತರಿದ್ದರು.