ನವದೆಹಲಿ: ರಾಜ್ಯ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಒಪ್ಪಿಗೆ ನೀಡದಿರುವ ವಿಚಾರವನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ಸಭೆ ನಡೆಸಿ, ಪರಿಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಗೆ ಸೂಚಿಸಿದೆ.
ವಿಧೇಯಕಗಳಿಗೆ ಒಪ್ಪಿಗೆ ನೀಡದ ರಾಜ್ಯಪಾಲರ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, "ರಾಜ್ಯಪಾಲರು ಬಿಕ್ಕಟ್ಟು ಪರಿಹರಿಸಬೇಕೆಂದು ನಾವು ಬಯಸುತ್ತೇವೆ. ರಾಜ್ಯಪಾಲರು ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ, ಬಿಕ್ಕಟ್ಟನ್ನು ಪರಿಹರಿಸಿದರೆ ನಾವು ಅದನ್ನು ಶ್ಲಾಘಿಸುತ್ತೇವೆ ಎಂದು ಹೇಳಿದೆ.
ರಾಜ್ಯಪಾಲರು ಮುಖ್ಯಮಂತ್ರಿಯನ್ನು ಆಹ್ವಾನಿಸುತ್ತಾರೆ ಮತ್ತು ಇಬ್ಬರೂ ಕುಳಿತು ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಪೀಠ ಹೇಳಿದೆ ಮತ್ತು ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮೂಂದೂಡಿದೆ.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ರಾಜ್ಯಪಾಲರು ಈಗ, ಸರ್ಕಾರ ಮತ್ತೊಮ್ಮೆ ಅಂಗೀಕರಿಸಿ ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದೆ ಎಂದು ತಿಳಿಸಿದರು.
"ನಾವು ಉನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬ ಬಗ್ಗೆ ನಮಗೆ ಅರಿವಿದೆ" ಎಂದ ಸುಪ್ರೀಂ ಪೀಠ, ಸಂವಿಧಾನದ 200ನೇ ವಿಧಿಯನ್ನು ಉಲ್ಲೇಖಿಸಿ, ರಾಜ್ಯಪಾಲರ ಕಚೇರಿ ವಾಪಸ್ ಕಳುಹಿಸಿದ ಮಸೂದೆಯನ್ನು ಶಾಸಕಾಂಗ ಸಭೆಯು ಪುನಃ ಅಂಗೀಕರಿಸಿ ಕಳುಹಿಸಿದ ನಂತರ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಬರುವುದಿಲ್ಲ ಎಂದು ಹೇಳಿದೆ.