ನವದೆಹಲಿ: ಸಂಸತ್ ಭದ್ರತಾ ವೈಫಲ್ಯ ಒಂದು ಗಂಭೀರ ವಿಷಯವಾಗಿದ್ದು, ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್'ಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ಭದ್ರತಾ ವೈಫಲ್ಯದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
'ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿವೆ. ಅದೇ ರೀತಿ ಕೃತ್ಯದಲ್ಲಿ ಭಾಗಿಯಾದವರ ಹಿನ್ನೆಲೆಯನ್ನು ಪರಿಶೀಲಿಸುವ ಮೂಲಕ ಈ ಕೃತ್ಯ ಎಸಗುವುದಕ್ಕೆ ಹಿಂದಿರುವ ಪ್ರಚೋದನೆಯೇನು ಎಂಬುವುದನ್ನು ಪತ್ತೆ ಮಾಡಬೇಕಿದೆ' ಎಂದರು.
'ಈ ವಿಚಾರವಾಗಿ ಸ್ಪೀಕರ್ ಅವರು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ' ಎಂದೂ ಹೇಳಿದರು.
ಡಿಸೆಂಬರ್ 13ರಂದು ಕಲಾಪ ನಡೆಯುತ್ತಿರುವಾಗ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' ಹಾರಿಸಿ ದಾಂಧಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಲಲಿತ್ ಮೋಹನ್ ಝಾ ಸೇರಿ ಒಟ್ಟು 7 ಜನರನ್ನು ಬಂಧಿಸಲಾಗಿದೆ.