ಜಮ್ಮು: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದ ಮೂವರು ವ್ಯಕ್ತಿಗಳು ಮೃತಪಟ್ಟಿರುವುದು ತೀವ್ರ ಚರ್ಚೆಗೆ ಒಳಗಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮೃತ ಹಾಗೂ ಗಾಯಾಳು ಕುಟುಂಬದವರನ್ನು ಬುಧವಾರ ಭೇಟಿ ಮಾಡಿ, ನ್ಯಾಯ ದೊರಕಿಸುವ ಭರವಸೆ ನೀಡಿದರು.
ಜಮ್ಮು: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದ ಮೂವರು ವ್ಯಕ್ತಿಗಳು ಮೃತಪಟ್ಟಿರುವುದು ತೀವ್ರ ಚರ್ಚೆಗೆ ಒಳಗಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮೃತ ಹಾಗೂ ಗಾಯಾಳು ಕುಟುಂಬದವರನ್ನು ಬುಧವಾರ ಭೇಟಿ ಮಾಡಿ, ನ್ಯಾಯ ದೊರಕಿಸುವ ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರ ಜೊತೆಗೂಡಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದಾಳಿ ನಡೆದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದರು. ಅಲ್ಲಿಯ ಭದ್ರತಾ ಪರಿಸ್ಥಿತಿಯನ್ನು ಅವರು ಪರಿಶೀಲಿಸಿದರು.
ಸಿಂಗ್ ಅವರು ಮೊದಲು ಮೃತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ನಂತರ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಕಿರುಕುಳ ಅನುಭವಿಸಿದ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. 'ನಮ್ಮ ಮೇಲೆ ಭರವಸೆ ಇಡಿ. ಮೃತಪಟ್ಟವರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದು' ಎಂದು ಮೂರು ಕುಟುಂಬಗಳ ಸದಸ್ಯರಿಗೆ ಭರವಸೆ ನೀಡಿದರು.
'ಪೂಂಛ್‌ನಲ್ಲಿ ನಡೆದ ಘಟನೆಯಿಂದ ನಾನು, ಲೆಫ್ಟಿನೆಂಟ್ ಗವರ್ನರ್ ಹಾಗೂ ಪ್ರಧಾನ ಮಂತ್ರಿ ತೀವ್ರವಾಗಿ ನೊಂದಿದ್ದೇವೆ. ಏನು ಘಟನೆ ನಡೆದಿದೆಯೋ ಅದಕ್ಕೆ ನ್ಯಾಯ ಸಿಗಲಿದೆ' ಎಂದರು.
ರಜೌರಿ ಮತ್ತು ಪೂಂಛ್‌ನಲ್ಲಿ ಸತತ ಐದನೇ ದಿನವೂ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ಪೂಂಛ್ ಜಿಲ್ಲೆಯಲ್ಲಿ ಡಿ. 21ರಂದು ಭದ್ರತಾ ಪಡೆಯ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಕೆಲವರು ಗಾಯಗೊಂಡಿದ್ದರು. ಅದರ ಮರುದಿನ ಭದ್ರತಾ ಪಡೆಯು ತನಿಖೆಯ ಭಾಗವಾಗಿ 13 ಮಂದಿ ನಾಗರಿಕರನ್ನು ವಶಕ್ಕೆ ಪಡೆಯಿತು. ಅವರಲ್ಲಿ ಮೂವರು ರಾತ್ರಿ ಮೃತಪಟ್ಟಿದ್ದರು. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಮೃತಪಡಲು ಮತ್ತು ಇತರರು ಗಾಯಗೊಳ್ಳಲು ಸೈನಿಕರು ನೀಡಿದ ಚಿತ್ರಹಿಂಸೆಯೇ ಕಾರಣ ಎಂದು ಮೃತರ ಸಂಬಂಧಿಕರು ಮತ್ತು ಗಾಯಗೊಂಡವರು ಆರೋಪಿಸಿದ್ದಾರೆ. ಸೇನೆಯು ಆಂತರಿಕ ತನಿಖೆಗೆ ಆದೇಶಿಸಿದೆ. ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.