ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ಲೊಗೊದಲ್ಲಿದ್ದ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ವಿಷ್ಣುವಿನ ಅವತಾರವಾದ ಹಾಗೂ ದೇವತೆಗಳ ವೈದ್ಯ ಎಂದೇ ಪುರಾಣಗಳಲ್ಲಿ ಹೇಳಿರುವ ಧನ್ವಂತರಿ ಚಿತ್ರವನ್ನು ಸೇರಿಸಿರುವುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ವಿರೋಧ ವ್ಯಕ್ತಪಡಿಸಿದೆ.
ಈ ಮೊದಲು ಇದ್ದ ಲಾಂಛನವು ಜಾತ್ಯತೀತ ಹಾಗೂ ಎಲ್ಲರನ್ನೂ ಒಂದುಗೂಡಿಸುವ ಸಂಕೇತದಂತಿತ್ತು. ಎಲ್ಲಾ ವರ್ಗಗಳಿಂದಲೂ ಒಪ್ಪಿತವಾಗಿತ್ತು. ಅಶೋಕನ ಸಾರನಾಥದಲ್ಲಿರುವ ಸಿಂಹ ಲಾಂಛನ ಹೊಂದಿದ್ದ ಮೊದಲಿನ ಲೊಗೊವನ್ನೇ ಮುಂದುವರಿಸುವಂತೆ ಹೋರಾಟ ನಡೆಸಲಾಗುವುದು' ಎಂದು ಕೇರಳ ಐಎಂಎ ಅಧ್ಯಕ್ಷ ಡಾ. ಸುಲ್ಫಿ ನೂಹ್ ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ನೋಂದಣಿ ಮಂಡಳಿಯ ಸದಸ್ಯ ಡಾ. ಯೋಗೇಂದ್ರ ಮಲ್ಲಿಕ್ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮೊದಲಿನಿಂದಲೂ ಆಯೋಗದ ಲೊಗೊದಲ್ಲಿ ಧನ್ವಂತರಿಯ ಚಿತ್ರವೇ ಇತ್ತು. ಮೊದಲು ಅದು ಕಪ್ಪು ಬಿಳುಪಾಗಿತ್ತು ಹಾಗೂ ಮಸುಕಾಗಿತ್ತು. ಈಗ ಬಣ್ಣದ ಚಿತ್ರವನ್ನು ಹಾಕಲಾಗಿದೆ. ರಾಷ್ಟ್ರೀಯ ಲಾಂಛನ ಆಯೋಗದ ಲೊಗೊದಲ್ಲಿ ಇರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ನೂತನ ಲೊಗೊ ಎನ್‌ಎಂಸಿ ಕಾಯ್ದೆ 2019ರ ಅನ್ವಯ 2020ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದಿದೆ. ಈ ಕುರಿತು ವರ್ಷದ ಹಿಂದೆ ದೇಶವ್ಯಾಪಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು' ಎಂದಿದ್ದಾರೆ.
'ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ, ಧರ್ಮ, ಲಿಂಗ ಬೇಧ ಇರಬಾರದು ಎಂಬ ನಿಯಮ ಪಾಲನೆಯಾಗಬೇಕು. ಆದರೆ ಈ ಕ್ಷೇತ್ರದಲ್ಲಿ ಯಾವುದೇ ಒಂದು ಜಾತಿ ಅಥವಾ ಧಾರ್ಮಿಕ ಭಾವನೆ ತುರುಕುವ ಪ್ರಯತ್ನವನ್ನು ಒಪ್ಪಲಾಗದು. ಭಾರತೀಯ ವೈದ್ಯಕೀಯ ಸಂಘವು ಎಲ್ಲಾ ಧರ್ಮ ಹಾಗೂ ಜಾತಿಗಳನ್ನು ಸಮನಾಗಿ ನೋಡುತ್ತದೆ. ಜತೆಗೆ ರಾಜಕೀಯ ಹಾಗೂ ಧಾರ್ಮಿಕ ಭಾವನೆಗಳಿಂದ ಸಮಾನ ಅಂತರ ಕಾಯ್ದುಕೊಂಡಿದೆ' ಎಂದು ನೂಹ್ ಹೇಳಿದ್ದಾರೆ.
ಎಂಬಿಬಿಎಸ್ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ತುಂಬು ತೋಳಿನ ಜಾಕೇಟ್ ಮತ್ತು ತಲೆಗೆ ಸರ್ಜಿಕಲ್ ಸ್ಕಾರ್ಫ್ ತೊಡಲು ಅನುಮತಿ ಕೇಳಿದ್ದರು. ಆದರೆ ಅದನ್ನು ನೀಡಲು ಐಎಂಎ ಕೇರಳ ಘಟಕ ವಿರೋಧಿಸಿತ್ತು.
'ಆಸ್ಪತ್ರೆ ಮತ್ತು ಶಸ್ತಚಿಕಿತ್ಸಾ ಕೊಠಡಿಯಲ್ಲಿ ರೋಗಿಯು ಅತ್ಯಂತ ಮಹತ್ವದ ವ್ಯಕ್ತಿ. ಅವರೊಂದಿಗೆ ವ್ಯವಹರಿಸುವಾಗ ಜಾಗತಿಕಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರ ಪಾಲಿಸಿಕೊಂಡು ಬಂದ ಪರಿಪಾಠವನ್ನೇ ಅನುಸರಿಸಬೇಕಾದ್ದು ಕಡ್ಡಾಯ' ಎಂದು ನೂಹ್ ಹೇಳಿದ್ದರು.