ಕಾಸರಗೋಡು: ಗೀತೆಯ ಪಠಣ ,ಅಧ್ಯಯನದ ಜತೆ ಗೀತಾಚಾರ್ಯರು ನೀಡಿದ ಯೋಗ, ಕರ್ಮಗಳನ್ನು ಅನುಷ್ಠಾನ ಮಾಡಿದರೆ ಮಾನವ ಜನ್ಮ ಪಾವನ ವಾಗುತ್ತದೆ ಎಂದು ಕಾಸರಗೋಡು ಜಿ.ಎಸ್.ಬಿ.ಸೇವಾ ಸಮಿತಿ ಅಧ್ಯಕ್ಷೆ ಗೀತಾ ರಾಮಚಂದ್ರ ಶೆಣೈ ತಿಳಿಸಿದ್ದರೆ.
ಅವರು ಕಾಸರಗೋಡು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ 113 ನೇ ವರ್ಷದ ಸಂಕೀರ್ತನಾ ಸಪ್ತಾಹ ಸಮಾರಂಭದ ವೇಳೆ ನಡೆದ ಗೀತಾ ಜಯಂತಿ ಅಂಗವಾಗಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಭಗವದ್ಗೀತೆಯು ಕರ್ತವ್ಯದಿಂದ ವಿಮುಕ್ತನಾದ ಅರ್ಜುನನಿಗೆ ಮೋಹ ಬಂಧನದಿಂದ ಹೊರ ಬರಲು ಶ್ರೀಕೃಷ್ಣ ಉಪದೇಶಿಸಿದ ಆಧ್ಯಾತ್ಮ ಅಮೃತ ಉಕ್ತಿಯಾಗಿದೆ. ಕುರುಕ್ಷೇತ್ರದಲ್ಲಿ ನಡೆಯಲಿದ್ದ ಮಹಾಯುದ್ಧದ ಸಂದರ್ಭದಲ್ಲಿ ಈ ಆಧ್ಯಾತ್ಮ ಸಾಹಿತ್ಯ ಅರ್ಜುನನನ್ನು ನಿಮಿತ್ತವಾಗಿಸಿ ಮಾನವ ಕುಲಕ್ಕೆ ನೀಡಿದ ಸಂಜೀವಿನಿಯಾಗಿದೆ ಎಂದು ತಿಳಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಗದೀಶ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 51 ಬಾರಿ ರಕ್ತದಾನ ಮಾಡಿರುವುದು ಮಾತ್ರವಲ್ಲ ಅನೇಕರಿಗೆ ರಕ್ತದಾನದ ಮಹತ್ವ ತಿಳಿಸಿ ಪ್ರೇರಣೆ ನೀಡಿ ಈ ಸೇವೆ ನಿರಂತರ ಮಾಡಿಸುತ್ತಿರವ ಸಮಾಜ ಸೇವಕ ಅಣಂಗೂರು ನಿವಾಸಿ ಕೆ.ದಯಾನಂದ ಭಟ್ ಅವರನ್ನು ಸನ್ಮಾನಿಸಲಾಯಿತು.
ಸಪ್ತಾಹ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಮೊಕ್ತೇಸರರಾದ ಸಿ.ರವಿಶಂಕರ ಕಾಮತ್, ವಿ.ಗಣೇಶ ಪ್ರಭು ಸಪ್ತಾಹ ಸಮಿತಿ ಅಧ್ಯಕ್ಷ ಎ.ರವೀಂದ್ರ ರಾವ್, ಜಿ.ಎಸ್.ಬಿ ಸೇವಾ ಸಂಘ ಅಧ್ಯಕ್ಷ ಕೃಷ್ಣ ಮಲ್ಯ ಉಪಸ್ಥಿತರಿದ್ದರು. ಪ್ರಶಾಂತ ಭಟ್ ಕಾರ್ಯಕ್ರಮ ನಿರೂಪಿಸಿದರು.