ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಾಂಸ್ಕೃತಿಕೋತ್ಸವವು ಶನಿವಾರ ಮುಳ್ಳೇರಿಯದ ಗಣೇಶ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಆರಂಭವಾಯಿತು.
ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ. ಡಾ. ರವಿಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಸಂಘಟನೆಯ ಜಿಲ್ಲಾಧ್ಯಕ್ಷ ಟಿ ಕೆ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಡಾ. ಬಿ. ಸೀತಾರಾಮ ಕಡಮಣ್ಣಾಯ, ಜಿಲ್ಲಾ ಖಜಾಂಜಿ ಅಡೂರು ಶ್ರೀಪ್ರಕಾಶ್ ಪಾಂಙಣ್ಣಾಯ, ಮುಳ್ಳೇರಿಯ ವಲಯ ಕಾರ್ಯದರ್ಶಿ ರಾಘವೇಂದ್ರ ರಾವ್, ವಿಜಯರಾಜ ಪುಣಿಂಚಿತ್ತಾಯ ಸಹಿತ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ವಲಯ ಸಮಿತಿಯ ನದಸ್ಯರು ಭಾಗವಹಿಸಿದ್ದರು. ನಂತರ ವಿವಿಧ ವಲಯಗಳ ಸದಸ್ಯರಿಗೆ ಗಾಯನ, ನೃತ್ಯ, ಗೀತಾ ಕಂಠಪಾಠ, ಭಾಷಣ, ಪುರಾಣ ರಸಪ್ರಶ್ನೆ, ಜಾನಪದ ನೃತ್ಯಗಳು ಮೊದಲಾದ ಅನೇಕ ಸ್ಪರ್ಧೆಗಳು ನಡೆದುವು. ಸಾಂಸ್ಕೃತಿಕೋತ್ಸವದ ಅಂಗವಾಗಿ ಗಣಪತಿ ಹವನ ನಡೆಯಿತು.
ಡಿ.24(ಇಂದು-ಭಾನುವಾರ) ರಂದು ಬೆಳಗ್ಗೆ 8.30ರಿಂದ ರಂಗೋಲಿ, ಸಮೂಹ ಗಾಯನ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಬೆಳಗ್ಗೆ 10.30ರಿಂದ ವಾರ್ಷಿಕ ಮಹಾಸಭೆ ನಡೆಯಲಿದೆ. ಅಪರಾಹ್ನ 2ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ನರಿಮೊಗರಿನ ಅವಿನಾಶ್ ಉಂಗ್ರುಪುಳಿತ್ತಾಯ ಕೊಡಂಕಿರಿ, ರಮಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ವಿದ್ಯಾರ್ಥಿವೇತನ, ವೈದ್ಯಕೀಯ ನಿಧಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.