ಕಾಸರಗೋಡು: ಕಾಞಂಗಾಡು ನಗರಸಭೆಯು ಹಸಿರು ಕ್ರಿಯಾ ಸೇನೆಯ ಸದಸ್ಯರಿಗಾಗಿ ತ್ಯಾಜ್ಯ ನಿರ್ವಹಣಾ ಪರಿಕರಗಳನ್ನು ಹಸ್ತಾಂತರಿಸಿತು. ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ನಡೆಸುತ್ತಿರುವ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿಂಗಡಿಸುವ ಟೇಬಲ್, ಟ್ರಾಲಿ, ತೂಕದ ಯಂತ್ರ ಮುಂತಾದ ಪರಿಕರಗಳನ್ನು ಹಸಿರು ಕ್ರಿಯಾ ಸೇನೆಗೆ ಹಸ್ತಾಂತರಿಸಲಾಯಿತು.
ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆಯನ್ವಯ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲಾಗಿದೆ. ಟ್ರಂಚಿಂಗ್ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಮುಖ್ಯ ಅತಿಥಿಯಾಗಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ನಗರಸಭಾ ಸದಸ್ಯೆ ಕೆ.ವಿ.ಸುಶೀಲಾ, ಮಿಥುನ್ ಕೃಷ್ಣ, ರೋಹಿತ್ ರಾಜ್, ಶುಚಿತ್ವ ಮಿಷನ್‍ನ ವೈ.ಪಿ.ರಹನಾ, ನಗರಸಭೆ ಪಿಎಚ್‍ಐ ಪಿ.ಟಿ.ರೂಪೇಶ್, ಹಸಿರು ಕ್ರಿಯಾ ಸೇನೆಯ ಸದಸ್ಯರು ಉಪಸ್ಥಿತರಿದ್ದರು. ನಗರಸಭೆ ಪಿಎಚ್‍ಐ ಕೆ.ಶಿಜು ಸ್ವಾಗತಿಸಿದರು. ಹಸಿರು ಕ್ರಿಯಾ ಸೇನಾ ಒಕ್ಕೂಟದ ಅಧ್ಯಕ್ಷ ಕೆ.ಪ್ರಸೇನ ವಂದಿಸಿದರು.