ಮಂಜೇಶ್ವರ : ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಲ್ಯಾಣ ಪಿಂಚಣಿ, ವಿಧವಾ ಪಿಂಚಣಿ, ಆಯುಷ್ ಮನೆ ಇತ್ಯಾದಿ ಸವಲತ್ತುಗಳು ವಿತರಣೆಯಾಗುತ್ತಿಲ್ಲ. ಕೆಎಸ್‍ಆರ್‍ಟಿಸಿಯಲ್ಲಿ ವೇತನ ಮತ್ತು ಪಿಂಚಣಿ ಸರಿಯಾಗಿ ನೀಡುತ್ತಿಲ್ಲ. ಸರ್ಕಾರ ಸಂಕಷ್ಟ ಎದುರಿಸುತ್ತಿರುವಾಗ ಮುಖ್ಯಮಂತ್ರಿಯ ನವಕೇರಳ ಸಮಾವೇಶಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ಹಣ ಮಂಜೂರು ಮಾಡುವಂತೆ ಸರ್ಕಾರ ಕೋರಿರುವುದು ಸಂಪೂರ್ಣ ಅನುಚಿತವಾಗಿದ್ದು, ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಸಂಕಷ್ಟ ಎದುರಾಗಲಿದೆ, ಆದುದರಿಂದ ವರ್ಕಾಡಿ ಗ್ರಾ.ಪಂ.ನಿಂದ ನವಕೇರಳ ಸಮಾವೇಶಕ್ಕೆ ಹಣ ನೀಡಬಾರದೆಂದು ನಿರ್ಣಯ ಮಂಡನೆ ಮಾಡಿದ ವರ್ಕಾಡಿ ಗ್ರಾಮಪಂಚಾಯತಿ ಜನಪ್ರತಿನಿಧಿಗಳು ಪಂಚಾಯತು ಸಿಬ್ಬಂದಿಗಳ ಜೊತೆ ಶುಕ್ರವಾರ ವಯನಾಡ್, ಮೂನಾರ್, ಊಟಿ ಪ್ರವಾಸಕ್ಕೆ ತೆರಳಿರುವ ಬಗ್ಗೆ ತಿಳಿದುಬಂದಿದೆ.
ಶುಕ್ರವಾರ ರಾತ್ರಿ ವರ್ಕಾಡಿ ಪಂಚಾಯತಿನ ಸುಮಾರು 30ಕ್ಕೂ ಮಿಕ್ಕಿದ ತಂಡ ಪ್ರವಾಸಕ್ಕೆ ತೆರಳಿದ್ದು, ವಯನಾಡು, ಮೂನ್ನಾರ್, ಊಟಿಗಳಲ್ಲಿ ಮೋಜು ಮಾಡಿ ಭಾನುವಾರ ರಾತ್ರಿ ಹಿಂತಿರುಗಲಿದೆ.
ಸಿಪಿಎಂ, ಸಿಪಿಐ, ಲೀಗ್, ಕಾಂಗ್ರೆಸ್ ಸದಸ್ಯರು ಮೋಜಿನ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿಯ ಐವರು ಸದಸ್ಯರು ಈ ಮೋಜಿನ ಪ್ರವಾಸದಿಂದ ದೂರವುಳಿದಿದ್ದಾರೆ.
ಸಾರ್ವಜನಿಕ ಚಂದಾ ಎತ್ತಿ ಜನಪ್ರತಿನಿಧಿಗಳ ಮೋಜು ಮಸ್ತಿ??:
ಪ್ರವಾಸ ಕಿಟ್ ಗೆ ರೂ.3800 ಪ್ರತಿಯೋರ್ವರು ನೀಡಬೇಕೆಂಬ ಬೇಡಿಕೆ ಇದೆ. ಆದರೆ ಕೆಲವು ಜನಪ್ರತಿನಿಧಿಗಳು, ಪಂಚಾಯತು ಸಿಬ್ಬಂದಿಗಳು ಟೂರ್ ತೆರಳಲು ಸಾರ್ವಜನಿಕ ಚಂದಾ ಎತ್ತಿರುವ ಬಗ್ಗೆ ಆರೋಪವೆದ್ದಿದೆ. ಗುತ್ತಿಗೆದಾರರಿಂದ, ಕಲ್ಲುಕ್ವಾರಿಗಳಿಂದ, ಫ್ಯಾಕ್ಟರಿಗಳಿಂದ ಪ್ರವಾಸ ನಿಧಿ ಸಂಗ್ರಹಿಸಿರುವ ಕುರಿತು ಆರೋಪವೆದ್ದಿದ್ದು, ಸಾರ್ವಜನಿಕರಿಂದ ಚಂದಾ ಎತ್ತಿ ಜನಪ್ರತಿನಿಧಿಗಳು ಈ ರೀತಿ ಮೋಜಿನ ಯಾತ್ರೆ ಮಾಡುತ್ತಿರುವುದಾದರೆ ದುರಂತವೇ ಸರಿ. ಈ ಕುರಿತು ಸಮಗ್ರ ತನಿಖೆ ನಡೆಸಲೇ ಬೇಕಿದೆ.
ಪಂಚಾಯತಿ ಆಡಳಿತ ಸಮಿತಿ ಸಭೆಯಲ್ಲಿ ಹಾವು - ಮುಂಗುಸಿಯಂತೆ ಕಾದಾಡುವ ಸದಸ್ಯರುಗಳಿಗೆ ಈಗ ಮೋಜಿನ ಯಾತ್ರೆಗೆ ತೆರಳುವಾಗ ಯಾವ ಸಿದ್ದಾಂತವೂ ಇಲ್ಲವೆಂಬುದಕ್ಕೆ ವರ್ಕಾಡಿ ಪಂಚಾಯತಿನ ಊಟಿ ಯಾತ್ರೆ ಪ್ರತ್ಯಕ್ಷ ಸಾಕ್ಷಿ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.