ಕುಂಬಳೆ: ಕೇರಳದ ಎಲ್‍ಡಿಎಫ್ ಸರ್ಕಾರದ ಬೂಟಾಟಿಕೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಹಾಗೂ ಕೇರಳದ ಸಹಕಾರಿ ಕ್ಷೇತ್ರ ಸಹಿತ ಸರ್ಕಾರದ ಜನವಿರೋಧಿ ಪತನದ ನೈಜ ಚಿತ್ರಣವನ್ನು ಜನತೆಯ ಮುಂದಿಡಲು ಯುಡಿಎಫ್ ಕೇರಳದ 140 ಕ್ಷೇತ್ರಗಳಲ್ಲಿ ಪ್ರತಿಭಟನಾ ಪ್ರಚಾರ ಆಂದೋಲನ ನಡೆಸುತ್ತಿದೆ. ಇದರ ಭಾಗವಾಗಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮಟ್ಟದ ಪ್ರತಿಭಟನೆ ಡಿಸೆಂಬರ್ 26 ಮಂಗಳವಾರ(ಇಂದು) ಮಧ್ಯಾಹ್ನ 3 ಕ್ಕೆ ಕುಂಬಳೆಯಲ್ಲಿ ನಡೆಸಲಾಗುವುದು ಎಂದು ಯುಡಿಎಫ್ ನಾಯಕರು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ವಿರುದ್ಧ ಯುಡಿಎಫ್ ಚಾರ್ಜ್ ಶೀಟ್ ಮಂಡಿಸಿದ್ದು, ದುರಾಡಳಿತದಿಂದ ನಲುಗುತ್ತಿರುವ ಜನರು ಮುಖ್ಯಮಂತ್ರಿ ಮತ್ತು ಸಚಿವರನ್ನು ಸಾಂಕೇತಿಕವಾಗಿ ಈ ಪ್ರತಿಭಟನೆಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ.
ಮಾಜಿ ಸಚಿವ ಹಾಗೂ ಯುಡಿಎಫ್ ಜಿಲ್ಲಾಧ್ಯಕ್ಷ ಸಿ.ಟಿ.ಅಹ್ಮದಲಿ ಉದ್ಘಾಟಿಸುವರು. ಯುಡಿಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜೀಜ್ ಮರಿಕೆ ಅಧ್ಯಕ್ಷತೆ ವಹಿಸುವರು. ಸಂಚಾಲಕ ಮಂಜುನಾಥ ಆಳ್ವ ಉಪಸ್ಥಿತರಿರುವರು. ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಟಿ.ಬಲರಾಮ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಶಾಜಿ ಭಾಷಣ ಮಾಡುವರು. ಯುಡಿಎಫ್ ರಾಜ್ಯ, ಜಿಲ್ಲಾ ಮುಖಂಡರು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕರಾದ ಎಕೆಎಂ ಅಶ್ರಫ್, ಎನ್ ಎ ನೆಲ್ಲಿಕುನ್ನು ಮಾತನಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಧ್ಯಕ್ಷ ಅಜೀಜ್ ಮರಿಕೆ, ಸಂಚಾಲಕ ಮಂಜುನಾಥ ಆಳ್ವ, ಸಹ ಸಂಚಾಲಕರಾದ ಎ.ಕೆ. ಆರೀಫ್, ಯು.ಕೆ ಸೈಪುಲ್ಲಾ ತಂಙಳ್, ಬಿ.ಎನ್. ಮುಹಮ್ಮದಲಿ, ಲೋಕನಾಥ ಶೆಟ್ಟಿ, ರವಿ ಪೂಜಾರಿ ಉಪಸ್ಥಿತರಿದ್ದರು.