ಪೂಂಛ್: ಸೇನಾ ವಾಹನಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತರು ನಿಗೂಢವಾಗಿ ಸಾವಿಗೀಡಾಗಿದ್ದು, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಇಂದು ಮುಂಜಾನೆಯಿಂದಲೇ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಗುರುವಾರ(ಡಿ.21) ಎರಡು ಸೇನಾ ವಾಹನಗಳ ಮೇಲೆ ಉಗ್ರರು ನಡೆಸಿದ್ದ ಹಠಾತ್ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಮೂವರು ಶಂಕಿತರನ್ನು ವಿಚಾರಣೆಗಾಗಿ ಸೇನೆ ವಶಕ್ಕೆ ಪಡೆದಿತ್ತು. ಶುಕ್ರವಾರ ಈ ಮೂವರು ನಿಗೂಢವಾಗಿ ಮೃತಪಟ್ಟಿದ್ದು, ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾದ ವಿಡಿಯೊಗಳೂ ಹರಿದಾಡಿದ್ದವು.
'ವದಂತಿಗಳು ಹರಡುವುದನ್ನು ತಡೆಯಲು ಮತ್ತು ಕಾನೂನು-ಸುವ್ಯವಸ್ಥೆ ಹದಗೆಡದಂತೆ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಎರಡು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಮೃತರನ್ನು ಟೋಪಾ ಪೀರ್ ಗ್ರಾಮದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಶಂಕಿತರ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.