ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಯನ್ನು ಕೂಡಲೇ ಪರಿಹರಿಸುವಂತೆ ಶಾಸಕ ಎ.ಕೆ.ಎಂ.ಅಶ್ರಫ್ ಆಗ್ರಹಿಸಿದ್ದಾರೆ. ಮಂಜೇಶ್ವರ ತಾಲೂಕು ಸಮ್ಮೇಳನ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂವಿಜ್ಞಾನ ಇಲಾಖೆಯು ಕೆಂಪು ಕಲ್ಲು ಮತ್ತು ಗ್ರಾನೈಟ್ ಅಕ್ರಮ ಕ್ವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಬಂಬ್ರಾಣದಲ್ಲಿ 400 ಎಕರೆ ಕೃಷಿ ಭೂಮಿಯನ್ನು ಕಾಡುಪ್ರಾಣಿಗಳು ನಾಶಪಡಿಸಿರುವ ಬಗ್ಗೆ ಕೃಷಿ ಇಲಾಖೆ ಕ್ರಮ ಕೈಗೊಂಡು ಪರಿಹಾರ ನೀಡಲಿದೆ ಎಂದು ಶಾಸಕರು ತಿಳಿಸಿದರು.
ಮಂಜೇಶ್ವರಂ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್, ಮಂಜೇಶ್ವರ ತಹಸೀಲ್ದಾರ್ ಟಿ.ಸಾಜಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 20 ದೂರುಗಳ ಪೈಕಿ 10ನ್ನು ಪರಿಹರಿಸಲಾಗಿದೆ. ಉಪ ತಹಸೀಲ್ದಾರ್ ದೇಲಿಕುಮಾರ್ ವಂದಿಸಿದರು.