ಕಾಸರಗೋಡು: ಕಣ್ಣೂರು ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉಂಟಾಗಿರುವ ಅನಿಯಂತ್ರಿತ ಹಣ ಹಿಂಪಡೆಯುವಿಕೆ ನಿಭಾಯಿಸಲು ಪ್ರಧಾನ ಕಚೇರಿಯಿಂದ ಸೂಕ್ತ ಪ್ರಮಾಣದ ಹಣ ಮತ್ತು ಸಿಬ್ಬಂದಿ ಸಹಾಯವನ್ನು ನೀಡಬೇಕು ಎಂದು ಕಾಞಂಗಾಡಿನಲ್ಲಿ ನಡೆದ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಸಭೆ ಒತ್ತಾಯಿಸಿದೆ.
ಇತರ ಜಿಲ್ಲೆಗಳ ಕೆಲವೊಂದು ಶಾಖೆಗಳಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನಡೆದುಬಂದಿರುವುದರಿಂದ ಜಿಲ್ಲೆಯ ಕುಂಬಳೆ, ಉಪ್ಪಳ, ಬದಿಯಡ್ಕ, ಪೆರ್ಲ ಪೆರ್ಲ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳಲ್ಲಿನ ಗ್ರಾಹಕರು ಮತ್ತು ಸಿಬ್ಬಂದಿಗಳು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಇವುಗಳಲ್ಲಿ ಬಹುತೇಕ ಸಂಸ್ಥೆ ಬಾಗಿಲು ಮುಚ್ಚಿದ್ದು, ಇದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೂರಾರು ಮಂದಿ ಕಾರ್ಮಿಕರು ವೇತನವೂ ಲಬ್ಯವಾಗದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಘಿದೆ.
ಗ್ರಾಹಕರಿಂದ ಕಂಪನಿಗಾಗಿ ಸಂಗ್ರಹಿಸಿದ ಠೇವಣಿ, ಪಿಗ್ಮಿ ಸಂಗ್ರಹದ ಮೊತ್ತವನ್ನು ಪ್ರಧಾನ ಕಚೇರಿಯ ಸೂಚನೆಯಂತೆ ಆಯಾ ಶಾಖೆಗಳಲ್ಲಿ ವಿನಿಯೋಗಿಸಿರುವುದಲ್ಲದೆ, ಲಕ್ಷಾಂತರ ರೂಪಾಯಿಯ ಸಾಲವನ್ನು ಗ್ರಾಹಕರಿಗೆ ನೀಡಲಾಗಿದೆ. ಪ್ರತಿ ಶಾಖೆಯಿಂದ ಲಕ್ಷಾಂತರ ರೂ. ಮೊತ್ತವನ್ನು ಆಯಾ ದಿನ ಪ್ರಧಾನ ಕಚೇರಿಗೂ ವರ್ಗಾಯಿಸಲಾಗಿದೆ. ಇವುಗಳ ಬಗ್ಗೆ ಸೂಕ್ತ ರೀತಿಯಲ್ಲಿ ದಾಖಲಾತಿಯನ್ನೂ ಇರಿಸಿಕೊಳ್ಳಲಾಗಿದೆ. ಅಲ್ಲದೆ ಸಂಸ್ಥೆ ಸಿಬ್ಬಂದಿ ತಮ್ಮ ವೈಯುಕ್ತಿಕ ಮತ್ತು ಅವರ ಮನೆಯವರ ಹೆಸರಲ್ಲಿ ಲಕ್ಷಾಂತರ ರೂ. ಮೊತ್ತವನ್ನು ಇಲ್ಲಿ ಠೇವಣಿಯಾಗಿ ಇರಿಸಿದ್ದಾರೆ. ಸಂಸ್ಥೆ ಸಿಬ್ಬಂದಿಗೆ ಕಳೆದ ಮೂರರಿಂದ ಆರು ತಿಂಗಳ ವರೆಗಿನ ವೇತನ ಮತ್ತು ಹಲವು ತಿಂಗಳಿಂದ ಪಿಎಫ್ ಸಹಿತ ಯಾವುದೇ ಸವಲತ್ತು ಇವರಿಗೆ ಲಭಿಸಿಲ್ಲ ಎಂದು ದೂರಲಾಗಿದೆ.
ಹಣ ಹಿಂಪಡೆಯಲು ಆಗಮಿಸುವ ಗ್ರಾಹಕರಿಗೆ ಶಾಖೆಗಳಲ್ಲಿ ಹಣವಿಲ್ಲದೆ, ಸಂಸ್ಥೆಯ ಪ್ರಧಾಣ ಕಚೇರಿ ಮೊರೆಹೋಗಬೇಕಾಗಿದೆ. ಆದರೆ ಗ್ರಾಹಕರಿಗೆ ನೀಡಲು ಸಾಕಾಗುವಷ್ಟು ಮೊತ್ತ ಪ್ರಧಾನ ಕಚೇರಿಯಿಂದಲೂ ಲಭ್ಯವಾಗುತ್ತಿಲ್ಲ. ಈ ಕೊರತೆಯನ್ನು ಸರಿಪಡಿಸಲು ಎಲ್ಲಾ ರೀತಿಯ ಒತ್ತಡಗಳನ್ನು ಹಾಕಲು ಕಾಸರಗೋಡು ಮತ್ತು ಮಂಗಳೂರು ವಲಯದ ಎಲ್ಲಾ ಸಿಬ್ಬಂದಿ ವರ್ಗದವರು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.