ನವದೆಹಲಿ: 'ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಲೋಕಸಭೆಯ ನೀತಿ ಸಮಿತಿ ಮಾಡಿರುವ ಶಿಫಾರಸು ಗಂಭೀರ ಸ್ವರೂಪದ ಶಿಕ್ಷೆಯಾಗಿದ್ದು, ಇದು ತೀವ್ರಸ್ವರೂಪದ ಸಂಕೀರ್ಣವಾದ ಪರಿಣಾಮವನ್ನು ಬೀರಲಿದೆ' ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಹೇಳಿದ್ದಾರೆ.
ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಬೇಕು ಎಂದು ನೀತಿ ಸಮಿತಿಯು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
ಶಿಫಾರಸಿಗೆ ಸಂಬಂಧಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ಚೌಧರಿ, ಸಂಸದೀಯ ಸಮಿತಿಗಳ ನೀತಿ ಮತ್ತು ಪ್ರಕ್ರಿಯೆಗಳ ಕುರಿತು ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
'ಹಕ್ಕುಬಾಧ್ಯತಾ ಸಮಿತಿ ಮತ್ತು ನೀತಿ ಸಮಿತಿಯ ಕರ್ತವ್ಯವ್ಯಾಪ್ತಿ ಕುರಿತು ಸ್ಪಷ್ಟಪಡಿಸಲಾಗಿಲ್ಲ. ಜೊತೆಗೆ, ಅನೈತಿಕ ನಡವಳಿಕೆ ಮತ್ತು ನಡವಳಿಕೆ ಸಂಹಿತೆ ಕುರಿತು ಇನ್ನೂ ನಿಯಮಗಳನ್ನು ರೂಪಿಸಲಾಗಿಲ್ಲ. ಹೀಗಾಗಿ, ಲೋಕಸಭಾ ಸದಸ್ಯರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಹುವಾ ಅವರ ವಿರುದ್ಧ ಮಾಡಿರುವ ಶಿಫಾರಸನ್ನು ಮರುಪರಿಶೀಲಿಸಬೇಕು' ಎಂದು ಕೋರಿದ್ದಾರೆ.
ಮಾಧ್ಯಮಗಳು ವರದಿ ಮಾಡಿರುವಂತೆ ಮಹುವಾ ಅವರನ್ನು ಉಚ್ಚಾಟಿಸಲು ನೀತಿ ಸಮಿತಿಯು ಶಿಫಾರಸು ನೀಡಿದೆ ಎಂಬುದು ನಿಜವೇ ಆದರೆ, ಇಂಥದ್ದೊಂದು ಶಿಫಾರಸನ್ನು ಇದೇ ಮೊದಲ ಬಾರಿಗೆ ನೀತಿ ಸಮಿತಿ ಮಾಡಿದಂತಾಗುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
'ನಿಮ್ಮ ನಾಯಕತ್ವದಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಮತ್ತು ಸಂಸತ್ ಪ್ರಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತೀರ ಎಂದು ನಂಬಿದ್ದೇನೆ' ಎಂದು ಸ್ಪೀಕರ್ ಅವರನ್ನು ಉದ್ದೇಶಿಸಿ ಚೌಧರಿ ಹೇಳಿದ್ದಾರೆ.
'ಕೇಂದ್ರದ ಸಂಚು': ಪತ್ರ ಬರೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಧರಿ ಅವರು, 'ಸಂಸದರೊಬ್ಬರನ್ನು ಅವಮಾನಿಸುತ್ತಿರುವ ರೀತಿಯು ಸ್ವೀಕೃತವಲ್ಲ ಎಂದು ತಿಳಿಸಲು ನಾನು ಸ್ಪೀಕರ್ ಅವರಿಗೆ ಪತ್ರ ಬರೆದೆ. ನೀತಿ ಸಮಿತಿಯು ಅನೈತಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಗೌಪ್ಯವಾಗಿರಬೇಕಿದ್ದ ನೀತಿ ಸಮಿತಿಯ ಚರ್ಚೆಗಳು ಬಹಿರಂಗವಾಗಿದ್ದು ಹೇಗೆ' ಎಂದು ಪ್ರಶ್ನಿಸಿದ್ದಾರೆ.
ಮಹುವಾ ಬೆಂಬಲಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಮಹುವಾ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾರಣ ಅವರನ್ನು ಉಚ್ಚಾಟಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಿಂದ ಡಿಸೆಂಬರ್ 22ರ ವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನವೇ ಮಹುವಾ ವಿರುದ್ಧದ ಶಿಫಾರಸು ಮಂಡನೆಯಾಗಲಿದೆ.