ಪತ್ತನಂತಿಟ್ಟ: ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಯ್ಯಪ್ಪನ ದರ್ಶನಕ್ಕೆ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದು ಸಮಸ್ಯೆಯಾಗುತ್ತಿದೆ.
ಶಬರಿಮಲೆಯಲ್ಲಿ ಪೋಲೀಸರ ಕ್ರಮದ ವಿರುದ್ಧ ಸಾಕಷ್ಟು ದೂರುಗಳು ಇದೀಗ ವ್ಯಕ್ತವಾಗಿದೆ. ಭಕ್ತರ ನೂಕುನುಗ್ಗಲು ನಿಯಂತ್ರಿಸಲು ಪೋಲೀಸರು ಕೈಗೊಂಡಿರುವ ಕ್ರಮಗಳ ವಿರುದ್ಧ ದೂರುಗಳು ಬರುತ್ತಿವೆ.
18 ಮೆಟ್ಟಲುಗಳ ಬಳಿ ಪೋಲೀಸ್ ಅಧಿಕಾರಿಗಳ ವಿರುದ್ಧವೂ ವ್ಯಾಪಕ ದೂರುಗಳಿವೆ. ಭಕ್ತಾದಿಗಳ ಸಂಚಾರ ವೇಗ ನಿಧಾನವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಕಳೆದ ಎರಡ್ಮೂರು ದಿನಗಳಿಂದ ಪಾದಚಾರಿ ಮಾರ್ಗಗಳು ಸದಾ ತುಂಬಿಕೊಂಡಿದೆ. ಭಕ್ತರು ಏಳು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸನ್ನಿಧಾನದಲ್ಲಿ ಶಯನ ಪ್ರದಕ್ಷಿಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಮುಂದೆ ಶಯನ ಪ್ರದಕ್ಷಿಣೆಗೆ ಗರ್ಭಗೃಹ ಮುಚ್ಚಿದ ನಂತರವೇ ಅವಕಾಶ ನೀಡಲಾಗುವುದು. ಮಕರ ಬೆಳಕು ಮುಗಿಯುವವರೆಗೆ ಸಹಸ್ರಕಲಶ ನೈವೇದ್ಯವನ್ನೂ ನಿಯಂತ್ರಿಸಲಾಗುತ್ತದೆ ಎಂದು ತಿಳಿದುಬಂದಿದೆ.