ತ್ರಿಶ್ಶೂರು: 'ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸುವ ಮೊದಲು ತಮ್ಮ ಹೋರಾಟ ಬಿಜೆಪಿ ವಿರುದ್ಧವೊ, ಎಲ್‌ಡಿಎಫ್ ವಿರುದ್ಧವೊ ಎನ್ನುವುದನ್ನು ಕಾಂಗ್ರೆಸ್ ನಿರ್ಧರಿಸಬೇಕು' ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಎಲ್‌ಡಿಎಫ್ ಎರಡೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಚನೆಯಾಗಿರುವ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿವೆ.
'ಮೈತ್ರಿ ಅಗತ್ಯವಿಲ್ಲ ಎಂದಾದಲ್ಲಿ ಕೇರಳದಲ್ಲಿ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇರಲಿದೆ' ಎಂದೂ ಮುಖ್ಯಮಂತ್ರಿ ಹೇಳಿದರು. ಈ ಮೂಲಕ ವಯನಾಡ್ ಕ್ಷೇತ್ರದಲ್ಲಿ ಎಲ್‌ಡಿಎಫ್, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.
'ಮೈತ್ರಿಕೂಟದ ಸದಸ್ಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೋ, ಬೇಡವೊ ಎಂಬುದನ್ನು ಇಂಡಿಯಾ ನಿರ್ಧರಿಸಲಾಗದು' ಎಂದು ಹೇಳಿದರು. ವಯನಾಡ್‌ನಿಂದಲೇ ರಾಹುಲ್ ಸ್ಪರ್ಧಿಸಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದರು.