HEALTH TIPS

ಸ್ವಯಂ ದಹನಕ್ಕೆ ಯೋಜನೆ!; ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಅಚ್ಚರಿ ತಿರುವು

                 ವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ಲೋಕಸಭೆಯ ಕಲಾಪ ಸ್ಥಳಕ್ಕೆ ಜಿಗಿಯುವ ಜತೆಗೆ ಅಲ್ಲೇ ಸ್ವಯಂ ದಹನಕ್ಕೆ ಯೋಜನೆ ರೂಪಿಸಿದ್ದರು. ಕರಪತ್ರಗಳನ್ನು ಎಸೆಯುವ ಬಗ್ಗೆಯೂ ಚರ್ಚೆ ನಡೆಸಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

              ಸದನದೊಳಗೆ ಪ್ರವೇಶಿಸಲು ಪಾಸ್​ಗಳನ್ನು ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

                    ಸರ್ಕಾರಕ್ಕೆ ತಮ್ಮ ಸಂದೇಶ ರವಾನಿಸಲು, ಆಡಳಿತದ ಮೇಲೆ ಪ್ರಭಾವ ಬೀರುವ ಕೆಲವು ಮಾರ್ಗಗಳ ಬಗ್ಗೆ ಐವರು ಆರೋಪಿಗಳು ಚರ್ಚೆ ನಡೆಸಿದ್ದರು. ತಮ್ಮ ದೇಹವನ್ನು ಅಗ್ನಿಶಾಮಕ ಜೆಲ್​ನಿಂದ ಲೇಪಿಸಿಕೊಂಡು ಸದನದಲ್ಲೇ ಬೆಂಕಿ ಹಚ್ಚಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದರು. ಆದರೆ ಭದ್ರತಾ ಕಾರಣ ಮತ್ತು ಹಣದ ಕೊರತೆಯಿಂದ ಇದು ಅಸಾಧ್ಯ ಎಂಬ ಕಾರಣಕ್ಕೆ ಕೈಬಿಟ್ಟಿದ್ದರು. ಸಂಸತ್ತಿನ ಒಳಗೆ ಕರಪತ್ರಗಳನ್ನು ಹಂಚುವ ಬಗ್ಗೆಯೂ ಅವರು ಯೋಚಿಸಿದ್ದರು. ಆದರೆ ಅಂತಿಮವಾಗಿ ಅವರು ಕಲರ್ ಸ್ಪ್ರೇ ಮಾಡುವ ನಿರ್ಧಾರ ಕೈಕೊಂಡಿದ್ದರು.

                  ಸಂಸತ್​ನ ಶೂನ್ಯ ವೇಳೆಯಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್​ಗೆ ಜಿಗಿದು ಹಳದಿ ಬಣ್ಣದ ಸ್ಪ್ರೇ ಮಾಡಿ ಘೋಷಣೆಗಳನ್ನು ಕೂಗಿದ್ದರು. ಅದೇ ಸಮಯದಲ್ಲಿ ಇತರ ಆರೋಪಿಗಳಾದ ಅಮೋಲ್ ಶಿಂಧೆ ಮತ್ತು

ನೀಲಂ ದೇವಿ ಸಂಸತ್ತಿನ ಆವರಣದ ಹೊರಗೆ ಇದೇ ರೀತಿಯ ಸ್ಪ್ರೇಗಳನ್ನು ಮಾಡಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಐದನೇ ಆರೋಪಿ ಲಲಿತ್ ಝಾ ಪ್ರತಿಭಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾನೆ.

                  ಗೂಗಲ್​ನಿಂದ ಮಾಹಿತಿ: ದಾಳಿಗೂ ಮುನ್ನ ಆರೋಪಿಗಳು ಗೂಗಲ್ ಬಳಸಿ ಹಲವು ಮಾಹಿತಿ ಪಡೆದಿದ್ದಾರೆ. ಸಂಸತ್ತಿನ ಭದ್ರತಾ ಕ್ರಮಗಳ ಬಗ್ಗೆ ಅವರು ಹುಡುಕಾಟ ನಡೆಸಿದ್ದಾರೆ. ಸಂಸತ್​ನ ಹಳೆಯ ವೀಡಿಯೊಗಳನ್ನು ಅಧ್ಯಯನ ಮಾಡಿದ್ದಾರೆ. ಸುರಕ್ಷಿತ ಸಂವಹನ ವಿಧಾನಗಳ ಬಗ್ಗೆ ಮಾಹಿತಿ ಪಡೆದಿದ್ದ ಅವರು, ಸಿಗ್ನಲ್ ಅಪ್ಲಿಕೇಶನ್ ಬಳಸಿ ಪರಸ್ಪರ ಸಂವಹನ ನಡೆಸಿದ್ದಾರೆ. ಹೀಗಾಗಿ ಇವರ ಯೋಜನೆ ಯಾವುದೇ ಗುಪ್ತಚರ ಸಂಸ್ಥೆಯ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.

                7 ದಿನ ಪೊಲೀಸ್ ಕಸ್ಟಡಿಗೆ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತ 6ನೇ ಆರೋಪಿ ಮಹೇಶ್ ಕುಮಾವತ್​ನನ್ನು ದೆಹಲಿ ನ್ಯಾಯಾಲಯ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಆರೋಪಿಗಳ ಮೊಬೈಲ್ ಫೋನ್​ಗಳನ್ನು ನಾಶ ಪಡಿಸುವ ಕೃತ್ಯದಲ್ಲಿ ಕುಮಾವತ್ ಭಾಗಿಯಾಗಿದ್ದ ಎನ್ನಲಾಗಿದೆ.

              ನಿರುದ್ಯೋಗ, ಬೆಲೆ ಏರಿಕೆ ಕಾರಣ ಎಂದ ರಾಹುಲ್: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ನಿರುದ್ಯೋಗ ಮತ್ತು ಬೆಲೆ ಏರಿಕೆ ಪ್ರಮುಖ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಯುವಕರು ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದ್ದಾರೆ. ಈ ಉಲ್ಲಂಘನೆಯು ಜನರ ದೀರ್ಘಕಾಲದ ಅಸಹನೆಯಿಂದ ಸಂಭವಿಸಿದೆ. ದೇಶದೆಲ್ಲೆಡೆ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ. ಮೋದಿಯವರ ನೀತಿಗಳಿಂದ ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ.

ಬಿಜೆಪಿ ತಿರುಗೇಟು: ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಶೇ. 3.2ರಷ್ಟಿದೆ. ಇದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ. ರಾಹುಲ್ ಗಾಂಧಿ ಆರೋಪ ಹಾಸ್ಯಮಯವಾಗಿದೆ. ಸಂಸತ್ತಿನ ಭದ್ರತೆ ಉಲ್ಲಂಘನೆ ಆರೋಪಿಗಳ ಜತೆ ಕಾಂಗ್ರೆಸ್ ಹೊಂದಿರುವ ನಿಕಟ ಸಂಪರ್ಕವನ್ನು ಅವರು ವಿವರಿಸಬೇಕು. ಆರೋಪಿಗಳಿಗೆ ಕಾನೂನು ನೆರವು ನೀಡುವುದಾಗಿ ಅಸಿಮ್ ಸರೋದೆ ಹೇಳಿದ್ದಾರೆ. ಅವರು ರಾಹುಲ್ ಗಾಂಧಿ ಜತೆ ಭಾರತ್ ಜೋಡೋ ಯಾತ್ರೆ ವೇಳೆ ಕಾಣಿಸಿಕೊಂಡಿದ್ದರು. ಅಸಿಮ್ ಸರೋದೆ ಅವರೊಂದಿಗಿನ ಸಂಬಂಧವನ್ನು ರಾಹುಲ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಹೇಳಿದ್ದಾರೆ.

                 ಉಗ್ರ ಸಂಪರ್ಕದ ಬಗ್ಗೆಯೂ ತನಿಖೆ: ಆರೋಪಿಗಳು ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿದ್ದರೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಕರಣದ ಪ್ರಮುಖ ಆರೋಪಿ ಲಲಿತಾ ಝಾ ವಿಚಾರಣೆ ನಡೆಸಲಾಗುತ್ತಿದೆ. ಝಾ ತನ್ನ ಫೋನ್ ಅನ್ನು ನಾಶ ಪಡಿಸಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಫೋನ್​ಗಳನ್ನೂ ಸುಟ್ಟುಹಾಕಿದ್ದಾನೆ ಎನ್ನಲಾಗಿದೆ. ಝಾ ನಿರುದ್ಯೋಗಿಯಾಗಿದ್ದು, ವಿದೇಶಿ ಹಣ ಪಡೆದು ಈ ಪಿತೂರಿ ನಡೆಸಿರುವ ಶಂಕೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂಸತ್ ಭವನದೊಳಗೆ ಆರೋಪಿಗಳು ಬಳಸಿದ್ದ ಸ್ಪ್ರೇ ಮರೆಮಾಚುವ ಪಾದರಕ್ಷೆಗಳನ್ನು ರೂಪಿಸಿದ ವಿನ್ಯಾಸಕಾರರ ಪತ್ತೆಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಸತ್ತಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಸಂಸತ್ ಸುತ್ತಲಿನ ಮೊಬೈಲ್ ಫೋನ್ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

                ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸಲು ಉನ್ನತ ಅಧಿಕಾರ ಸಮಿತಿ ರಚನೆ ಮಾಡಲಾಗಿದೆ. ಡಿ. 13ರ ಘಟನೆ ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ. ಉನ್ನತ ಮಟ್ಟದ ತನಿಖಾ ಸಮಿತಿಯ ವರದಿಯನ್ನು ಸದ್ಯದಲ್ಲೇ ಸಂಸತ್​ನಲ್ಲಿ ಹಂಚಿಕೊಳ್ಳಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries