ಅಹಮದಾಬಾದ್: ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ(GIFT ಸಿಟಿ) ಯಲ್ಲಿ "ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆ"ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಗುಜರಾತ್ ಸರ್ಕಾರ, ಶುಕ್ರವಾರ ಈ ಪ್ರದೇಶದಲ್ಲಿ ಮದ್ಯ ನಿಷೇಧ ಆದೇಶವನ್ನು ಹಿಂಪಡೆದಿದೆ.
ಮಹಾತ್ಮಾ ಗಾಂಧಿಯವರು ಜನಿಸಿದ ರಾಜ್ಯವಾಗಿರುವುದರಿಂದ, ಗುಜರಾತ್ ರಚನೆಯಾದಾಗಿನಿಂದ ರಾಜ್ಯದಲ್ಲಿ ಮದ್ಯದ ಪಾನೀಯಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ.
ಈ ಹಿಂದೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಇಂತಹ ವಿನಾಯಿತಿ ನೀಡಿರಲಿಲ್ಲ. ಆದರೆ "ಗಿಫ್ಟ್ ಸಿಟಿ ಜಾಗತಿಕ ಆರ್ಥಿಕ ಮತ್ತು ತಾಂತ್ರಿಕ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದೆ. ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ಗಿಫ್ಟ್ ಸಿಟಿ ಪ್ರದೇಶದಲ್ಲಿ `ವೈನ್ ಮತ್ತು ಡೈನ್' ಸೌಲಭ್ಯಕ್ಕೆ ಅನುಮತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಹೊಸ ವ್ಯವಸ್ಥೆಯಡಿಯಲ್ಲಿ, ಗಿಫ್ಟ್ ಸಿಟಿ ಪ್ರದೇಶದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಿಗೆ(ಅಸ್ತಿತ್ವದಲ್ಲಿರುವ ಮತ್ತು ಮುಂದೆ ಬರಲಿರುವ) ವೈನ್ ಮತ್ತು ಡೈನ್ ಸೌಲಭ್ಯಕ್ಕೆ ಪರವಾನಗಿಗಳನ್ನು ನೀಡಲಾಗುತ್ತದೆ" ಎಂದು ಪ್ರಕಟಣೆ ಹೇಳಿದೆ.
ಆದಾಗ್ಯೂ, ಅಂತಹ ಹೋಟೆಲ್‌ಗಳು, ರೆಸ್ಟೋರೆಂಟ್ ಮತ್ತು ಕ್ಲಬ್ ಗಳು ಜನರಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲು ಅನುಮತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.