ಛತ್ರಪತಿ ಸಂಭಾಜಿನಗರ, ಮಹಾರಾಷ್ಟ್ರ: 'ಅಮೋಲ್ ಶಿಂದೆ ಸೇನೆ ಸೇರಲು ಇಚ್ಛಿಸಿದ್ದ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಿಂಗಳಿಗೆ ₹ 4,000 ಕೊಡುವಂತೆ ಕೇಳಿದ್ದ ಆದರೆ ನಮಗೆ ಕೊಡಲು ಆಗಿರಲಿಲ್ಲ' ಎಂದು ಪೋಷಕರು ಹೇಳಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಭದ್ರತಾ ಲೋಪದ ವೇಳೆಯೇ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿ ಅಮೋಲ್ ಶಿಂದೆ ಬಂಧನಕ್ಕೆ ಒಳಗಾಗಿದ್ದ.
ದೆಹಲಿ ಘಟನೆ ಬಳಿಕ ಲಾತೂರು ಪೊಲೀಸರ ತಂಡವು ಝರಿ ಗ್ರಾಮಕ್ಕೆ ತೆರಳಿ ಶಿಂದೆ ಮನೆಯಲ್ಲಿ ಶೋಧ ನಡೆಸಿದೆ. ಬುಧವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಈತನ ತಾಯಿ ಕೇಸರ್‌ಬಾಯಿ, ' ಸೇನಾ ನೇಮಕಾತಿಯ ವಯೋಮಿತಿ ಮೀರಿದ್ದರಿಂದ ಯಾವುದಾದರೂ ಕಂಪನಿ ಸೇರಿಕೊಳ್ಳಲು ನಾನು ಹೇಳುತ್ತಿದ್ದೆ. ಪೊಲೀಸರು ನಮ್ಮ ಮನೆಗೆ ಬಂದಾಗಲೇ ನಮಗೆ ಸಂಸತ್ತಿನಲ್ಲಿ ನಡೆದ ಘಟನೆ ಬಗ್ಗೆ ಗೊತ್ತಾಗಿದ್ದು. ಕ್ರೀಡೆಗೆ ಸಂಬಂಧಿಸಿದ ಆತನ ಕೆಲವು ದಾಖಲೆಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ' ಎಂದು ಹೇಳಿದರು.
'ಲಾತೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಬಯಸಿದ್ದ. ಅದಕ್ಕಾಗಿ ₹ 4000 ತಿಂಗಳಿಗೆ ಬೇಕು ಎಂದು ಕೇಳಿದ್ದ. ನಮಗೆ ಕೊಡಲಾಗಲಿಲ್ಲ' ಎಂದರು.
'ಅಮೋಲ್ ದಿನಗೂಲಿ ಕಾರ್ಮಿಕನಾಗಿಯೂ ಕೆಲಸ ಮಾಡಿದ್ದ. ಇತರರು ನೇಮಕಾತಿ ಮೂಲಕ ಸೇನೆ ಸೇರಿದ್ದರು. ಅವನಿಗೆ ಸಾಧ್ಯವಾಗಿರಲಿಲ್ಲ. ದಿನಗೂಲಿ ಕಾರ್ಮಿಕನಾಗಿ ಇನ್ನೆಷ್ಟು ದಿನಗಳು ದುಡಿಯಬೇಕು ಎಂದು ಆತ ಆಲೋಚಿಸಿರಬೇಕು. ಅದಕ್ಕಾಗೇ ಈ ಕೃತ್ಯ ಎಸಗಿರಬೇಕು' ಎಂದು ಆತನ ತಂದೆ ಧನ್‌ರಾಜ್ ಶಿಂಧೆ ಅಭಿಪ್ರಾಯ ಪಟ್ಟರು.
'ಆತ ಈ ಪ್ರಕರಣದಲ್ಲಿ ಸುರಕ್ಷಿತವಾಗಿ ಹೊರಬಂದರೆ ಗ್ರಾಮಕ್ಕೆ ಮರಳಿ ಬರುತ್ತಾನೆ. ಬರದಿದ್ದರೆ, ನಮಗೆ ಮಗನೇ ಇರಲಿಲ್ಲ ಎಂದು ಅಂದುಕೊಳ್ಳುತ್ತೇವೆ' ಎಂದೂ ಅವರು ಹೇಳಿದರು.
ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಿಂದ ಬೇಸರಗೊಂಡು ಈ ಕೃತ್ಯ ಎಸಗಿದ್ದಾಗಿ, ಬಣ್ಣದ ಹೊಗೆಯ ಉಗುಳುವ ಐದು ಕ್ಯಾನ್‌ಗಳನ್ನು ತಾನು ₹1,200ಕ್ಕೆ ಕೊಂಡು ತಂದಿದ್ದಾಗಿ ವಿಚಾರಣೆ ವೇಳೆ ಅಮೋಲ್ ಹೇಳಿರುವುದಾಗಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.