ಲಂಡನ್: ನಿಕಾರಗುವಾ 303 ಭಾರತೀಯ ಪ್ರಯಾಣಿಕರನ್ನು ಹೊತ್ತು ಹಾರಿದ ವಿಮಾನವೊಂದರಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಸುಳಿವು ನೀಡಿದ ಅನಾಮಧೇಯ ಕರೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.
ದುಬೈನಿಂದ ಹಾರಿದ ರೊಮಾನಿಯಾದ ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ ಎ340 ವಿಮಾನದಲ್ಲಿ 303 ಜನ ಪ್ರಯಾಣಿಕರು ಇದ್ದರು.
303 ಭಾರತ ಮೂಲದ ಪ್ರಯಾಣಿಕರನ್ನು ಯುಎಇ ಯಿಂದ ಹೊತ್ತು ಹಾರಿದ ವಿಮಾನವು, ಇಂಧನ ಭರಿಸಲು ಫ್ರಾನ್ಸ್‌ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆದರೆ ಆರಂಭದಲ್ಲಿ ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಲಾಗಿತ್ತು. ನಂತರ ಅವರಿಗೆ ಹಾಸಿಗೆಗಳನ್ನು ನೀಡಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲೇ ಮಲಗಲು ಸೂಚಿಸಲಾಗಿತ್ತು. ಆದರೆ ಈ ಕುರಿತು ಬಂದ ಅನಾಮಧೇಯ ಕರೆಯೊಂದು ಮಾನವ ಕಳ್ಳ ಸಾಗಣೆಯ ಸುಳಿವು ನೀಡಿತು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ 'ಲ ಮಾಂಡೆ' ಪತ್ರಿಕೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ, 'ದುಬೈನಿಂದ ನಿಕಾರಗುವಾ ಹೊರಟಿದ್ದ ವಿಮಾನವೊಂದು ತಾಂತ್ರಿಕ ಸಮಸ್ಯೆಯಿಂದ ಫ್ರಾನ್ಸ್ ನೆಲದ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇದರಲ್ಲಿರುವ ಪ್ರಯಾಣಿಕರು ಭಾರತೀಯರೆಂಬ ಶಂಕೆ ಇರುವುದಾಗಿ ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಚಾರಣೆ ಆರಂಭಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.