ಮಂಜೇಶ್ವರ: ಕುಂಜತ್ತೂರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ಕೌಶಲ್ಯ ಅಭಿವೃದ್ಧಿ ಕೇಂದ್ರ ಅನುಮೋದನೆಗೊಂಡಿದ್ದು, ಜನವರಿ 1 ರಿಂದ ಆರಂಭಗೊಳ್ಳಲಿದೆ. ಯುವಜನರಿಗೆ ಅವರ ಸಾಮಥ್ರ್ಯ ಮತ್ತು ಆಧುನಿಕ ಉದ್ಯೋಗಾವಕಾಶಗಳಿಗೆ ಅನುಗುಣವಾಗಿ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ಉದ್ದೇಶದಿಂದ ಇದನ್ನು ಈ ಶಾಲೆಯಲ್ಲಿ ಆರಂಭಿಸಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ಯೋಜನೆ ಜಾರಿಯಾಗಿದೆ. ಪ್ರತಿ ಜಿಲ್ಲೆಯನ್ನು ಕೇಂದ್ರೀಕರಿಸಿದ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಸೃಷ್ಟಿಸುವ ನವೀನ ಉಪಕ್ರಮವು ಶೈಕ್ಷಣಿಕ ಶಿಕ್ಷಣಕ್ಕಿಂತ ಹೆಚ್ಚಾಗಿ ವೃತ್ತಿಪರ ಕೌಶಲ್ಯಗಳನ್ನು ಹೊಂದಿರುವ ಸಮಾಜವನ್ನು ರೂಪಿಸುವ ಲಕ್ಷ್ಯ ಹೊಂದಿದೆ.
ಪ್ರತಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಎಸ್‍ಡಿಸಿಯನ್ನು ಪ್ರಾರಂಭಿಸಲಾಗುವುದು. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರವಾಗಿ ಆಯ್ಕೆಯಾಗಿರುವ ಜಿವಿಎಚ್ ಎಸ್ ಎಸ್ ಕುಂಜತ್ತೂರಿನಲ್ಲಿ ಮೊದಲ ಹಂತದಲ್ಲಿ ಎರಡು ಕೋರ್ಸ್ ಗಳನ್ನು ಆರಂಭಿಸಲಾಗುವುದು.
ಹದಿನೈದು ಮತ್ತು 23 ವರ್ಷದೊಳಗಿನವರು ಟೆಲಿಕಾಂ ಟೆಕ್ನಿಷಿಯನ್ ಐಒಟಿ ಡಿವೈಸಸ್ ಮತ್ತು ಫಿಟ್‍ನೆಸ್ ಟ್ರೈನರ್ ಎಂಬ ಎರಡು ಕೋರ್ಸ್‍ಗಳಿಗೆ ತರಬೇತಿ ಪಡೆಯಲು ಅವಕಾಶವನ್ನು ನೀಡಲಾಗುತ್ತದೆ. ಪ್ರತಿ ತಂಡದಲ್ಲಿ(ಬ್ಯಾಚ್‍ನಲ್ಲಿ) ಗರಿಷ್ಠ 25 ಜನರಿಗೆ ತರಬೇತಿ ನೀಡಲಾಗುತ್ತದೆ. ಪ್ಲಸ್ ಟು ತರಗತಿ ಇತ್ತೀಚೆಗೆ ಪೂರ್ತಿಗೊಳಿಸಿದವರಿಗೂ ಮೊದಲ ತಂಡಗಳಲ್ಲಿ ಪ್ರವೇಶ ಪಡೆಯಬಹುದು.
ಇದು ಸಂಪೂರ್ಣ ಉಚಿತ ಕೋರ್ಸ್‍ಗಳಾಗಿದ್ದು, 400 ರಿಂದ 500 ಗಂಟೆಗಳ ತರಬೇತಿಯನ್ನು ನೀಡಲಾಗುತ್ತದೆ. ಮತ್ತು ರಜಾ ದಿನಗಳಲ್ಲೂ ಅಧ್ಯಯನ ಸಮಯವನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಇಂಗ್ಲಿಷ್ ಅಧ್ಯಯನ ಮಾಧ್ಯಮವಾಗಿದೆ. ವಿಶೇಷ ತರಬೇತಿ ಪಡೆದ ಶಿಕ್ಷಕರು ತರಗತಿಯನ್ನು ಮುನ್ನಡೆಸುತ್ತಾರೆ.
ಪ್ರಾಂಶುಪಾಲ ಶಿಶುಪಾಲನ್, ಮುಖ್ಯಶಿಕ್ಷಕ ಜಿ.ಬಾಲಕೃಷ್ಣ ಹಾಗೂ ಪಿಟಿಎ ಅಧ್ಯಕ್ಷ ಎಸ್.ಕೆ.ಖಾದರ್ ಹನೀಫ್ ಈ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಪ್ರಥಮ ಎಸ್‍ಡಿಸಿಯಾಗಿರುವ ಜಿವಿಎಚ್‍ಎಸ್‍ಎಸ್ ಕುಂಜÀತ್ತೂರು ಶಾಲೆ ಪ್ರಾಯೋಗಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಿದೆ. 23 ಲಕ್ಷ ವೆಚ್ಚದಲ್ಲಿ ಇನ್ಫೋಸಿಸ್ ನಿರ್ಮಿಸಿ ಒದಗಿಸಿರುವ ಲ್ಯಾಬ್‍ನಲ್ಲಿ ಟೆಲಿಕಾಂ ತಂತ್ರಜ್ಞ ಐಒಟಿ ಡಿವೈಸ್ ಕೋರ್ಸ್ ಆರಂಭಿಸಲಾಗುವುದು. ಎರಡು ಕೋಟಿ ವೆಚ್ಚದಲ್ಲಿ ಕೆಡಿಪಿ ನಿರ್ಮಿಸಿರುವ ವೊಕೇಷನಲ್ ಹೈಯರ್ ಸೆಕೆಂಡರಿ ಕಟ್ಟಡದಲ್ಲಿ ಫಿಟ್ನೆಸ್ ಟ್ರೈನರ್ ಕೋರ್ಸ್ ಕೂಡ ನಡೆಯಲಿದೆ ಎಂದು ತಿಳಿಸಿರುವರು.
ಎರಡೂ ಕೋರ್ಸ್‍ಗಳಿಗೆ ಎಸ್‍ಎಸ್‍ಕೆ ಕಟ್ಟಡ ಶೀಘ್ರದಲ್ಲೇ ನಿರ್ಮಾಣ:
ಕುಂಜತ್ತೂರು ಜಿವಿಎಚ್‍ಎಸ್‍ಎಸ್ ಶಾಲೆಯಲ್ಲಿ ಸ್ಥಾಪಿಸಲಾಗುವ ಕೌಶಲ್ಯಾಭಿವೃದ್ಧಿ ಕೇಂದ್ರವು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ. ಸ್ಕಿಲ್ ಸೆಂಟರ್ ಕೋಆರ್ಡಿನೇಟರ್ ಹುದ್ದೆಗಳಿಗೆ, ಸ್ಕಿಲ್ ಅಸಿಸ್ಟೆಂಟ್, ಟ್ರೈನರ್ ಟೆಲಿಕಾಂ ಟೆಕ್ನೀಷಿಯನ್ ಐಒಟಿ ಡಿವೈಸಸ್, ಟ್ರೈನರ್ ಫಿಟ್‍ನೆಸ್ ಟ್ರೈನರ್ ಕೋರ್ಸ್ ನೇಮಕಾತಿ ಅರ್ಜಿ ನಮೂನೆಯ ಮಾದರಿ ಮತ್ತು ಅರ್ಹತಾ ಮಾಹಿತಿಯು ಶಾಲೆಯ ಸೂಚನಾ ಫಲಕದಲ್ಲಿ ಲಭ್ಯವಿದೆ. ಅರ್ಜಿದಾರರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ವಿದ್ಯಾರ್ಹತೆಯ ಪ್ರತಿಯೊಂದಿಗೆ ಜನವರಿ 5 ರ ಮೊದಲು ಶಾಲೆಯ ಪ್ರಾಂಶುಪಾಲರ ಮುಂದೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಭ್ಯರ್ಥಿಗಳು ಜನವರಿ 8 ರಂದು ಖುದ್ದು ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಬಹುದು. ಮಾಹಿತಿಗೆ ದೂರವಾಣಿ 9947196262 ಸಂಖ್ಯೆಗೆ ಕರೆಮಾಡಲು ಸೂಚಿಸಲಾಗಿದೆ.