ತಿರುವನಂತಪುರಂ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರವನ್ನು ಕಳುಹಿಸಿದ್ದು, ರಾಜ್ಯಪಾಲರು ಭದ್ರತಾ ಸೂಚನೆಗಳನ್ನು ಪಾಲಿಸುತ್ತಿಲ್ಲ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಝಿಕ್ಕೋಡ್ ಮಿಠಾಯಿ ಬೀದಿಗೆ ರಾಜ್ಯಪಾಲರ ಅನಿರೀಕ್ಷಿತ ಭೇಟಿಯನ್ನೂ ಪತ್ರದಲ್ಲಿನ ಟೀಕೆಗಳು ಸೂಚಿಸಿವೆ. ಬುಧವಾರ ಪತ್ರ ರವಾನೆಯಾಗಿದ್ದರೂ ಸರ್ಕಾರ ಈ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ರಾಜ್ಯಪಾಲರು ವಿಐಪಿಯಾಗಿ ಶಿμÁ್ಟಚಾರ ಉಲ್ಲಂಘಿಸಿ ಪ್ರಯಾಣಿಸಿದ್ದಾರೆ ಹಾಗೂ ಅದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಅಧಿಕಾರ ನಡೆಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ತೀವ್ರಗೊಳ್ಳುತ್ತಿರುವಾಗಲೇ ರಾಜ್ಯಪಾಲರು ಕೋಝಿಕ್ಕೋಡ್ ನಗರಕ್ಕೆ ಬಂದಿದ್ದರು. ಜನರನ್ನು ವಿಚಾರಿಸಿ, ಮಕ್ಕಳನ್ನು ಮುದ್ದಿಸಿ, ಅಂಗಡಿಗಳಿಗೆ ನುಗ್ಗಿ ಹಲ್ವಾ ಸವಿಯುತ್ತಾ ಜನಮನ ಮುಟ್ಟಿದರು. ಇದರಿಂದ ಸರ್ಕಾರ ತೀವ್ರ ಅಸಮಾಧಾನಗೊಂಡಿದೆ. ಅದಾದ ನಂತರ ಸಚಿವರು ಹಾಗೂ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಟೀಕಿಸಿ ರಂಗಕ್ಕೆ ಬಂದರು.