ಜೆರುಸಲೇಂ: ಭಾರತವು ಬಿಡುಗಡೆ ಮಾಡಿರುವ ಎರಡನೇ ಕಂತಿನ ಸುಮಾರು ₹ 20.80 ಕೋಟಿ ದೇಣಿಗೆ ಮೊತ್ತವು ಪ್ಯಾಲೆಸ್ಟೀನ್ ನಿರಾಶ್ರಿತರ ಜೀವ ರಕ್ಷಣೆ ಕೆಲಸಗಳನ್ನು ಮುಂದುವರಿಸಲು ನೆರವಾಗಲಿದೆ ಎಂದು ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಪರಿಹಾರ ಕಾರ್ಯದ ಏಜೆನ್ಸಿ (ಯುಎನ್‌ಆರ್‌ಡಬ್ಲ್ಯುಎ) ಶುಕ್ರವಾರ ಹೇಳಿದೆ.
ಭಾರತವು ನೆರವಿನ ಮೊತ್ತ ಬಿಡುಗಡೆ ಮಾಡಿದ ಮರು ದಿನವೇ ವಿಶ್ವಸಂಸ್ಥೆಯ ಈ ಏಜೆನ್ಸಿಯು ಭಾರತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. 1950ರಿಂದ ಯುಎನ್‌ಆರ್‌ಡಬ್ಲ್ಯು, ನೋಂದಾಯಿತ ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ನೇರವಾಗಿ ಪರಿಹಾರ ಒದಗಿಸುವ ಕಾರ್ಯ ನಿರ್ವಹಿಸುತ್ತಿದೆ.
'ನಾವು ಈ ಪ್ರದೇಶದಲ್ಲಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿ ಎದುರಿಸುತ್ತಿದ್ದು, ಪ್ಯಾಲೆಸ್ಟೀನ್ ನಿರಾಶ್ರಿತರ ಪರ ಬೆಂಬಲ ನೀಡುವ ಪಾಲುದಾರ ರಾಷ್ಟ್ರಗಳಿಗೆ ಏಜೆನ್ಸಿಯು ಕೃತಜ್ಞವಾಗಿರಲಿದೆ. ಭಾರತದ ಇತ್ತೀಚಿನ ಉದಾರ ನೆರವು ಪ್ಯಾಲೆಸ್ಟೀನ್ ನಿರಾಶ್ರಿತರ ಕಡೆಗೆ ತನ್ನ ಜೀವರಕ್ಷಕ ಸೇವೆಗಳನ್ನು ಮುಂದುವರಿಸಲು ಏಜೆನ್ಸಿಗೆ ಅನುಕೂಲ ಮಾಡಿಕೊಡಲಿದೆ' ಎಂದು ವಕ್ತಾರ ತಮಾರಾ ಅಲ್ರಿಫೈ ಹೇಳಿದ್ದಾರೆ.
ಭಾರತವು ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ಪರಿಹಾರ ಕಲ್ಪಿಸಲು ವಾರ್ಷಿಕ ಬದ್ಧತೆಯ ನೆರವಿನ ಮೊತ್ತದ ಮೊದಲ ಕಂತನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ, ಅದಕ್ಕೂ ಒಂದು ತಿಂಗಳು ಮುಂಚಿತವಾಗಿಯೇ ಬಿಡುಗಡೆ ಮಾಡಿತ್ತು.