ಇಸ್ಲಾಮಾಬಾದ್: 370ನೇ ವಿಧಿಯಡಿ ಜಮ್ಮು -ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಇದು ಕಾಶ್ಮೀರದ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
'ಭಾರತದ ಉನ್ನತ ನ್ಯಾಯಾಲಯದ ತೀರ್ಪು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ' ಎಂದು ಖಾನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ತೆಹ್ರೀಕ್-ಇ-ಇನ್ಸಾಫ್ ಪಕ್ಷ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ಸದ್ಯ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಇಮ್ರಾನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
' ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ಮತ್ತು ಕಾನೂನುಬಾಹಿರವಾದ ಈ ನಿರ್ಧಾರವು ಕಾಶ್ಮೀರದಲ್ಲಿ ದಶಕಗಳ ಕಾಲ ಜೀವಂತವಾಗಿರುವ ಸಂಘರ್ಷಕ್ಕೆ ಪರಿಹಾರ ನೀಡುವ ಬದಲು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನಮ್ಮ ಪಕ್ಷವು ಕಾಶ್ಮೀರದ ಜನತೆಗೆ ರಾಜತಾಂತ್ರಿಕ, ನೈತಿಕ ಹಾಗೂ ರಾಜಕೀಯವಾಗಿ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ' ಎಂದು ಹೇಳಿದರು.