ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವಾದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಎಂಬ ಜನಾಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ 'ನಾನೂ ಕೇಜ್ರಿವಾಲ್' ಎಂಬ ಸಹಿ ಸಂಗ್ರಹ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಆರಂಭಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿರಬಹುದಾದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರಿಗೆ ಇತ್ತೀಚೆಗೆ ನೋಟಿಸ್ ನೀಡಿತ್ತು. 'ನೋಟಿಸ್ ನೀಡಿರುವುದು ಕಾನೂನಿಗೆ ವಿರುದ್ಧವಾದದ್ದು ಹಾಗೂ ರಾಜಕೀಯ ಪ್ರೇರಿತ' ಎಂದ ಆರೋಪಿಸಿದ್ದ ಕೇಜ್ರಿವಾಲ್, ವಿಚಾರಣೆಗೆ ಹಾಜರಾಗಿರಲಿಲ್ಲ.
'ಈ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರ ಬಂಧನವಾದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಅಥವಾ ಜೈಲಿನಿಂದಲೇ ಸರ್ಕಾರ ನಡೆಸಬೇಕೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಎಎಪಿಯು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಇದಕ್ಕಾಗಿ 'ನಾನೂ ಕೇಜ್ರಿವಾಲ್' ಎಂಬ ಅಭಿಯಾನ ಆರಂಭಿಸಿದೆ' ಎಂದು ಪಕ್ಷದ ಮುಖಂಡ ಗೋಪಾಲ್ ರಾಯ್ ಹೇಳಿದ್ದಾರೆ.
'ಬಿಜೆಪಿಯ ಪಿತೂರಿಯಿಂದ ಅರವಿಂದ ಕೇಜ್ರಿವಾಲ್ ಅವರ ಬಂಧನದ ವದಂತಿ ಎಲ್ಲೆಡೆ ಹಬ್ಬಿದ್ದು, ಜನರು ಇದರ ವಿರುದ್ಧ ಆಕ್ರೋಶಗೊಂಡಿದ್ದಾರೆ. ದೆಹಲಿಗಾಗಿ ಸಾಕಷ್ಟು ಕೆಲಸ ಮಾಡಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಂಧನವನ್ನು ಬಿಜೆಪಿ ಬಯಸುತ್ತಿರುವುದೇಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ' ಎಂದು ರಾಯ್ ಎಕ್ಸ್ ಪೋಸ್ಟ್‌ನಲ್ಲೂ ಬರೆದುಕೊಂಡಿದ್ದಾರೆ.
ಈ ಸಹಿ ಅಭಿಯಾನದ ಭಾಗವಾಗಿ 2,600 ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಸಹಿ ಸಂಗ್ರಹಿಸುತ್ತಿದ್ದಾರೆ.