ನವದೆಹಲಿ: ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಜಾತಿ ವಿಷಯವನ್ನು ಸಂಸತ್ತಿನವರೆಗೆ ತಂದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ ಆರೋಪಿಸಿದರು.
ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಈಚೆಗೆ ಪ್ರತಿಭಟನೆ ವೇಳೆ ತಮ್ಮ ಬಗ್ಗೆ ಅಣಕವಾಡುವ ಮೂಲಕ ರೈತ ಮತ್ತು ಜಾಟ್ ಜಾತಿಯ ತಮ್ಮ ಹಿನ್ನೆಲೆಯನ್ನು ಅವಮಾನಿಸಿದ್ದಾರೆ ಎಂದು ಧನಕರ್ ಆಪಾದಿಸಿದ್ದರು.
ಪ್ರತಿಪಕ್ಷಗಳ ಸಂಸದರು ಸಂಸತ್ತಿನಿಂದ ವಿಜಯ್‌ಚೌಕ್‌ವರೆಗೆ ಪ್ರತಿಭಟನೆ ನಡೆಸಿದ ಬಳಿಕ ಖರ್ಗೆ ಮತ್ತು ಪವಾರ್ ಮಾತನಾಡಿದರು. ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಮತ್ತು 143 ಸಂಸದರ ಅಮಾನತು ವಿರುದ್ಧ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸದನದಲ್ಲಿ ಮಾತನಾಡದೆ ಪ್ರಧಾನಿ ಮತ್ತು ಗೃಹಸಚಿವರು ಸಂಸತ್ತನ್ನು ಅವಮಾನಿಸಿದ್ದಾರೆ. ಪ್ರಧಾನಿ ಅವರು ಲೋಕಸಭೆ ಮತ್ತು ರಾಜ್ಯಸಭೆ ಹೊರತು ಪಡಿಸಿ ವಾರಾಣಸಿ ಸೇರಿದಂತೆ ಎಲ್ಲ ಕಡೆ ಮಾತನಾಡುತ್ತಾರೆ. ಇದು ಹಕ್ಕುಚ್ಯುತಿ ವಿಷಯ. ಸರ್ಕಾರ ಪ್ರಜಾಸತ್ತಾತ್ಮಕವಾಗಿ ವರ್ತಿಸಬೇಕು ಎಂದು ಖರ್ಗೆ ಅವರು ಹೇಳಿದರು.
ಪವಾರ್ ಅವರು, 'ಆರೋಪಿಗಳು ಸದನದೊಳಗೆ ಹೇಗೆ ಬಂದರು ಮತ್ತು ಅವರಿಗೆ ಪಾಸ್‌ಗಳನ್ನು ನೀಡಿದ್ದು ಯಾರು ಎಂಬ ಬಗ್ಗೆ ಸರ್ಕಾರದ ಕಡೆಯಿಂದ ಹೇಳಿಕೆ ನೀಡಬೇಕು ಎಂಬ ಒಂದೇ ಬೇಡಿಕೆ ಇದ್ದಿದ್ದು' ಎಂದರು.
'ಸಂಸತ್ತಿನ ಹೊರಗೆ ಯಾರೊ ಏನೋ ಮಾಡಿದ್ದನ್ನು ಇಲ್ಲಿಯವರೆಗೆ ತಂದು ವಿಷಯವನ್ನು ದೊಡ್ಡದು ಮಾಡುವುದು ಸರಿಯಲ್ಲ. ನನ್ನ ವಿರುದ್ಧ ಯಾರೊ ಏನೊ ಹೇಳಿದರೆ, ಅದು ಮರಾಠರಿಗೆ, ರೈತರಿಗೆ ಮಾಡಿದ ಅವಮಾನ ಎಂದು ನಾನು ಹೇಳಿದರೆ ಹೇಗೆ? ಆದರೆ ನಾನು ಎಂದಿಗೂ ಹಾಗೆ ಹೇಳುವುದಿಲ್ಲ' ಎಂದು ನುಡಿದರು.
'ಜಾಟ್ ಸಮುದಾಯದ ರೈತರು ಗಾಜಿಪುರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಬಿಜೆಪಿಯು ದಂಡ ಪ್ರಯೋಗಿಸಲು ಪೊಲೀಸರಿಗೆ ಹೇಳಿತ್ತು. ಆಗ ಜಾಟ್ ಜಾತಿಗಾಗಲೀ, ರೈತರಿಗಾಗಲೀ ಅವಮಾನ ಆಗಿರಲಿಲ್ಲ. ಜಾಟ್ ಕುಟುಂಬಕ್ಕೆ ಸೇರಿದ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಜಾಟ್ ಜಾತಿಯವರಿಗೆ ಅವಮಾನವಾಗಿರಲಿಲ್ಲವೇ?' ಎಂದು ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಅವರು ಕೇಳಿದರು.
'ಮೀರಾಕುಮಾರ್ ಅವರು ಸ್ಪೀಕರ್ ಆಗಿದ್ದ ವೇಳೆ ಅವರನ್ನು ಕುರಿತ ಅಣಕಗಳು ಚಾನೆಲ್‌ಗಳಲ್ಲೂ ಪ್ರಸಾರವಾಗಿತ್ತು. ಅವರು ಅದು ದಲಿತರಿಗೆ ಆದ ಅವಮಾನ ಎಂದಿರಲಿಲ್ಲ. ಭದ್ರತೆ ಉಲ್ಲಂಘನೆ ಮತ್ತು ತಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಕ್ಷುದ್ರ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಇತಿಹಾಸಕ್ಕೆ ಇದೊಂದು ಕಪ್ಪು ಚುಕ್ಕೆ' ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು, ಭಾರತದಲ್ಲಿ ಸಂಸದೀಯ ಪ್ರಜಾಸತ್ತೆಯ ನಿಧನದ ಸುದ್ದಿ ಬರೆಯಬೇಕಾದ ಕ್ಷಣ ಬಂದಿದೆ ಎಂದು ಪ್ರತಿಕ್ರಿಯಿಸಿದರು.
ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು, 'ಸಂಸದೀಯ ಪ್ರಜಾಸತ್ತೆ ಇಲ್ಲಿಲ್ಲ. ಇದು ವಿರೋಧಪಕ್ಷ ಮುಕ್ತ ಸಂಸತ್. ಇದು ಬಹುತೇಕ ಅರಸೊತ್ತಿಗೆಯಂತೆ. ಈಗ ಅವರು ಭಾರತವು ರಾಜಪ್ರಭುತ್ವ ಎಂದು ಹೇಳಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು' ಎಂದು ಹೇಳಿದರು.