ಮೆಲ್ಬರ್ನ್: ಭಾರತೀಯ ಮೂಲದ ಎರಡು ಕುಟುಂಬಗಳ ಐವರ ಸಾವಿಗೆ ಕಾರಣವಾಗಿದ್ದ ಆಸ್ಟ್ರೇಲಿಯಾ ಮೂಲದ 66 ವರ್ಷದ ವಿಲಿಯಂ ಸ್ವೇಲ್ ಎಂಬುವರನ್ನು ಸೋಮವಾರ ಬಂಧಿಸಿ, ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ.5ರಂದು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಾಯಲ್ ಡೇಲ್ಸ್‌ಫೋರ್ಡ್ ಹೋಟೆಲ್ ಒಳಗೆ ನುಗ್ಗಿತ್ತು.
ಪರಿಣಾಮ ವಿವೇಕ್ ಭಾಟಿಯಾ (38), ವಿಹಾನ್ (11), ಪ್ರತಿಭಾ ಶರ್ಮಾ(44) ಅನ್ವಿ(9) ಜತಿನ್ ಕುಮಾರ್ (30) ಮೃತಪಟ್ಟಿದ್ದರು. ಭಾಟಿಯಾ ಅವರ ಕಿರಿಯ ಮಗ ಅಬೀರ್ ಮತ್ತು ಪತ್ನಿ ರುಚಿ ತೀವ್ರ ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಅಜಾಗರೂಕತೆ ಚಾಲನೆ ಮತ್ತು ನಿರ್ಲಕ್ಷ್ಯ ಆರೋಪದ ಮೇಲೆ ಸ್ವೇಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.