ಬಾಗ್ದಾದ್ (ಎಎಫ್‌ಪಿ): ಬಿಗಿ ಭದ್ರತೆಯುಳ್ಳ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಗುರುವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ.
ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಸೇನಾಪಡೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಪ್ಯಾಲೆಸ್ಟೀನ್ ಇಸ್ಲಾಮಿಸ್ಟ್ ಸಮೂಹವಾದ ಹಮಾಸ್ ನಡುವಣ ಯುದ್ಧದ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ.
ಇರಾನ್ ಜೊತೆಗೆ ಗುರುತಿಸಿಕೊಂಡಿರುವ ಬಂಡುಕೋರರು ದಾಳಿ ನಡೆಸಿರುವ ಸೂಚನೆಗಳಿವೆ. ಇಸ್ರೇಲ್ ಸರ್ಕಾರವು ರಾಜತಾಂತ್ರಿಕ ವಿಭಾಗ ಮತ್ತು ಸಿಬ್ಬಂದಿಯ ರಕ್ಷಣೆಗೆ ಎಲ್ಲ ಅಧಿಕಾರ ಬಳಸಿಕೊಳ್ಳಬೇಕು ಎಂದು ಅಮೆರಿಕದ ವಕ್ತಾರರು ಇರಾಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇರಾನ್ ಪರ ಗುಂಪುಗಳು ಅಕ್ಟೋಬರ್ ನಂತರ ಅಮೆರಿಕ ಮತ್ತು ಮೈತ್ರಿ ಪಡೆಗಳನ್ನು ಗುರಿಯಾಗಿಸಿ 12ಕ್ಕೂ ಹೆಚ್ಚು ಬಾರಿ ರಾಕೆಟ್, ಡ್ರೋನ್ ದಾಳಿ ನಡೆಸಿವೆ. ಆದರೆ, ರಾಯಭಾರಿ ಕಚೇರಿ ಗುರಿಯಾಗಿಸಿ ರಾಕೆಟ್ ದಾಳಿ ನಡೆದಿರುವುದು ಇದೇ ಮೊದಲು.