ಕುಂಬಳೆ: ಹಿರಿಯ ಲೇಖಕಿ ಸತ್ಯವತಿ ಕೊಳಚಿಪ್ಪು ಅವರಿಗೆ 2023ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಲಭಿಸಿದೆ. ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಮಹಿಳಾ ಘಟಕದ ನೇತೃತ್ವದೊಂದಿಗೆ ಹವ್ಯಕ ಭಾಷೆಯಲ್ಲಿ ನಡೆಯುತ್ತಿರುವ ಕಥಾಸ್ಪರ್ಧೆಯಲ್ಲಿ ಒಟ್ಟು 24 ಮಂದಿ ಪಾಲ್ಗೊಂಡಿದ್ದರು. ಕಥಾಸ್ಪರ್ಧೆಯನ್ನು ಸಂಚಾಲಕಿಯಾಗಿ ಹಿರಿಯ ಲೇಖಕಿ, ಸಾಹಿತಿ ವಿಜಯಾ ಸುಬ್ರಹ್ಮಣ್ಯ ಅವರು ಕಳೆದ 23 ವರ್ಷದಿಂದ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಂಘಟನೆಯ ಅಧ್ಯಕ್ಷೆಯಾಗಿ ಈಶ್ವರಿ ಬೇರ್ಕಡವು ನೇತೃತ್ವ ವಹಿಸುತ್ತಿದ್ದಾರೆ. ಕತೆಯ ಮೌಲ್ಯಮಾಪನದಲ್ಲಿ ಹಿರಿಯ ಸಾಹಿತಿ, ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಕುಂಬಳೆ ನಿವೃತ್ತ ಅಧ್ಯಾಪಕರು, ನಾರಾಯಣ ಹೆಗಡೆ, ಕುಂಬಳೆ, ನಿವೃತ್ತ ಅಧ್ಯಾಪಕ ಬಾಲಕೃಷ್ಣ ಶರ್ಮ ಸಹಕರಿಸಿದ್ದರು.
ಪ್ರಶಸ್ತಿ ಪುರಸ್ಕತರಾದ ಸತ್ಯವತಿ ಕೊಳಚಿಪ್ಪು :
ದಿ. ಡಾ.ಶ್ರೀಧರ ಭಟ್,ಬೀಡುಬೈಲು ಇವರ ಪತ್ನಿಯಾದ ಸತ್ಯವತಿ ಕೊಳಚ್ಚಿಪ್ಪು ಅವರ `ಕರುಳಸಂಬಂಧ' ಕತೆಯು ಪ್ರಶಸ್ತಿಗೆ ಆಯ್ಕೆಯಾಗಿದೆ. 2022 ರಲ್ಲಿ ಇದೇ ವೇದಿಕೆಯಲ್ಲಿ ತೃತೀಯ ಬಹುಮಾನ ಗೆದ್ದುಕೊಂಡಿದ್ದ ಇವರು ಕೆಲವು ಕವನ ಸಂಕಲನಗಳನ್ನೂ ಬರೆದಿದ್ದಾರೆ. ನವಿಲು ಗರಿ, ಅಂಬಾ-ಅಂಬಾ, ಗೊಂಚಲು, ಮುತ್ತು-ಅಮ್ಮನ ಕೈತುತ್ತು, ಸ್ವಾತಿ ಮುತ್ತು(ಮುಕ್ತಕ) ಹೀಗೆ ಇವರ 6 ಕವನ ಕೃತಿಗಳು ಬೆಳಕು ಕಂಡಿವೆ. 'ಕಾಮನ ಬಿಲ್ಲು' ಮಕ್ಕಳ ಕವನ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ `ನಾಡಿಸೋಜ' ಮತ್ತು ರಾಜರತ್ನಂ ದತ್ತಿ ಪ್ರಶಸ್ತಿ, ಹಾಗೆಯೇ ವೈದೇಹಿ ದತ್ತಿ ಪುರಸ್ಕಾರವೂ ದೊರಕಿದೆ. `ನವಿಲು ಗರಿ' ಮಕ್ಕಳ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿಬಹುಮಾನ ಬಂದಿದೆ. ಆಹಾರ ಬದ್ಧತೆ ಹಾಗೂ ದಿನನಿತ್ಯದ ಪ್ರಾಣಾಯಾಮ ಮಾಡುವ ಇವರು 80 ರ ಅಂಚಿನ ಉತ್ಸಾಹಿ ಮಹಿಳೆಯಾಗಿದ್ದಾರೆ.
ದ್ವೀತೀಯ ಬಹುಮಾನ ಪಡೆದ ಶುಭಾ ನಾಗರಾಜ್
ದ್ವಿತೀಯ ವಿಜೇತೆಯಾದ ಶುಭಾ ನಾಗರಾಜ್ ಬರೆದ `ಇರುವುದೆಲ್ಲವ ಬಿಟ್ಟು' ಕತೆಗೆ ಎರಡನೇ ಬಹುಮಾನ ದೊರಕಿದೆ. ಇವರು ಕತೆ, ಕವನಗಳ ಬರವಣಿಗೆ, ಹಾಡುಗಾರಿಕೆ, ತೋಟಗಾರಿಕೆ ಇವರ ಹವ್ಯಾಸ.
ತೃತೀಯ ವಿಜೇತೆ ಕಲ್ಪನಾ ಹೆಗಡೆ :
ಕಲ್ಪನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸೋಮನಹಳ್ಳಿಯವರು. ಇವರು ಬರೆದ `ಸವಕಳಿ' ಕತೆಗೆ ಮೂರನೇ ಬಹುಮಾನ ಬಂದಿದೆ. ಹಲವಾರು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕವನ, ಲೇಖನ ಬರೆಯುವ ಇವರು ಆರು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ.