ನವದೆಹಲಿ (PTI): ದೇಶದಲ್ಲಿ ರೈಲು ಪ್ರಯಾಣ ದರಗಳನ್ನು ನಿರ್ಧರಿಸಲು ಸಚಿವಾಲಯವು ಯಾವುದೇ ದರಪಟ್ಟಿ ಸಮಿತಿ ರಚಿಸುವ ಯೋಜನೆ ಹೊಂದಿಲ್ಲದಿರುವುದರಿಂದ ಪ್ರಯಾಣಿಕರು ಹಬ್ಬಗಳ ಸಮಯದಲ್ಲಿ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.

ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ವಿಷಯ ತಿಳಿಸಿದ್ದಾರೆ.
'ಸಂದರ್ಭಕ್ಕನುಗುಣವಾಗಿ ನ್ಯಾಯಸಮ್ಮತ ಪ್ರಯಾಣ ದರ ಪರಿಷ್ಕರಣೆಯು ವಿವಿಧ ಮಾರ್ಗಗಳಿಂದ ಪಡೆದ ಮಾಹಿತಿಗಳ ಆಧಾರದ ಮೇಲೆ ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ. ಸದ್ಯ, ರೈಲ್ವೆ ಪ್ರಯಾಣ ದರವನ್ನು ನಿಗದಿಪಡಿಸಲು ಸಮಿತಿ ರಚಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ' ಎಂದು ಅವರು, ಡಿಎಂಕೆ ಸಂಸದ ಪಿ. ವಿಲ್ಸನ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
'ಪ್ರಯಾಣಿಕರ ಶುಲ್ಕ ಸೇರಿ ಪ್ರಯಾಣಿಕರ ವಿವಿಧ ಸೇವೆಯ ಸಂಬಂಧಿತ ನೀತಿಗಳ ಬಗ್ಗೆ ಪ್ರಯಾಣಿಕರ ಸಂಘಗಳು, ನಿಲ್ದಾಣದಲ್ಲಿನ ಸಲಹಾ ಸಮಿತಿಗಳು, ವಿಭಾಗ, ವಲಯ ಮಟ್ಟಗಳು ಇತ್ಯಾದಿಗಳ ಮೂಲಕ ಪ್ರತಿಕ್ರಿಯೆಯನ್ನು ನಿರಂತರ ಸ್ವೀಕರಿಸಲಾಗುತ್ತದೆ' ಎಂದು ವೈಷ್ಣವ್ ಹೇಳಿದರು.
2019-20ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ ₹59,837 ಕೋಟಿ ಸಬ್ಸಿಡಿಯನ್ನು ರೈಲ್ವೆ ನೀಡಿದೆ. ಇದರಿಂದ ರೈಲುಗಳಲ್ಲಿ ಪ್ರಯಾಣಿಸುವ ಪ್ರತಿ ವ್ಯಕ್ತಿಗೆ ಸರಾಸರಿ ಶೇ 53ರಷ್ಟು ರಿಯಾಯಿತಿ ಸಿಕ್ಕಿದೆ. ಸಬ್ಸಿಡಿಯನ್ನು ಎಲ್ಲಾ ವರ್ಗದ ಪ್ರಯಾಣಿಕರಿಗೂ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹಬ್ಬಗಳ ಸಮಯದಲ್ಲಿ ಮೂಲ ದರದಲ್ಲಿ ಶೇ 300 ರಷ್ಟು ಹೆಚ್ಚಳ ಮಾಡುತ್ತಿರುವುದಕ್ಕೆ ಸಂಬಂಧಿಸಿ ಪ್ರಯಾಣಿಕರು ವ್ಯಕ್ತಪಡಿಸಿರುವ ಕಳವಳ ಸರ್ಕಾರಕ್ಕೆ ತಿಳಿದಿದೆಯೇ? ರೈಲ್ವೆ ಪ್ರಯಾಣ ದರ ನಿಗದಿಗೆ ಸಮಿತಿ ರಚಿಸಲು ಸರ್ಕಾರ ಯೋಜಿಸುತ್ತಿದೆಯೇ ಎಂದು ವಿಲ್ಸನ್ ಪ್ರಶ್ನೆ ಕೇಳಿದ್ದರು.