ನವದೆಹಲಿ: 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ (ಎನ್‌ಜಿಎಸಿ) ಕೆಲಸ ನಿರ್ವಹಿಸಲು ಅವಕಾಶವನ್ನೇ ನೀಡಲಿಲ್ಲ' ಎಂದು ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.
'ಎನ್‌ಜೆಎಸಿ ಅನ್ನು ಭಿನ್ನವಾಗಿ ನಿರ್ವಹಿಸಬಹುದಿತ್ತು. ಪ್ರಯೋಗಾರ್ಥವಾಗಿ ಉಳಿಸಬಹುದಿತ್ತು. ಆದರೆ, ಕೆಲಸ ಮಾಡಲು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಎನ್‌ಜೆಎಸಿ ಅನ್ನು ರದ್ದುಪಡಿಸಿದಾಗ, ವ್ಯವಸ್ಥೆ ಬದಲಾಗಲು ನ್ಯಾಯಮೂರ್ತಿಗಳು ಬಿಡುತ್ತಿಲ್ಲ, ಸಂಸತ್ತಿನ ಸರ್ವಾನುಮತದ ನಿರ್ಧಾರವನ್ನು ಹೀಗೆ ರದ್ದುಪಡಿಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಯಿತು. ಇದು, ನಂತರ ದಿನಗಳಲ್ಲಿ ಕೊಲಿಜಿಯಂ ವ್ಯವಸ್ಥೆ ಕಾರ್ಯವೈಖರಿಯ ಮೇಲೂ ಪರಿಣಾಮವನ್ನು ಬೀರಿತು' ಎಂದು ಅಭಿಪ್ರಾಯಪಟ್ಟರು.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೌಲ್ ಅವರು, 'ಕೊಲಿಜಿಯಂ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಯಾರಾದರೂ ಒಪ್ಪಲೇಬೇಕು. ಕೊಲಿಜಿಯಂ ಸರಾಗವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳುವುದು ಅವಾಸ್ತವಿಕವಾದುದು ಎಂದರು.
ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ರಚಿಸಿತ್ತು. ನ್ಯಾಯಮೂರ್ತಿಗಳ ನೇಮಕಾತಿ ಹೊಣೆ ಈ ಆಯೋಗದ್ದಾಗಿತ್ತು. ಆದರೆ, ಎನ್‌ಜೆಎಸಿ ರಚನೆಯೇ ಅಸಾಂವಿಧಾನಿಕ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, 2015ರ ಅಕ್ಟೋಬರ್ ತಿಂಗಳಲ್ಲಿ ಇದನ್ನು ರದ್ದುಪಡಿಸಿತ್ತು
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವ, ಸಿಜೆಐ ಹೆಸರು ಸೂಚಿಸುವ ಇಬ್ಬರು ಪ್ರಮುಖರು, ಪ್ರಧಾನಮಂತ್ರಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಎನ್‌ಜೆಎಸಿ ಸದಸ್ಯರಾಗಿದ್ದರು.
ಒಂದು ವರ್ಷ ಕಾಲ ಸುಪ್ರೀಂ ಕೋರ್ಟ್‌ನ ಕೊಲಿಜಿಯಂನ ಭಾಗವಾಗಿದ್ದ ಕೌಲ್ ಅವರು, 'ಪ್ರಸ್ತುತ ಪರಿಸ್ಥಿತಿಯಲ್ಲಿ ಕೊಲಿಜಿಯಂ ವ್ಯವಸ್ಥೆಯು ಈ ದೇಶದ ಕಾನೂನು. ಅದನ್ನು ಈಗ ಇರುವಂತೆಯೇ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು.