ಕಾಸರಗೋಡು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನಿಗಾವಹಿಸಲಾಗುತ್ತಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಈಗಾಗಲೇ ಪೊಲಿಸ್ ಅಲರ್ಟ್ ಘೋಷಿಸಿದ್ದು, ಜನದಟ್ಟನೆಯಿರುವ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಶ್ವಾನದಳ, ಬಾಂಬ್ ಸ್ಕ್ವೇಡ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ವಿವಿಧ ವಸತಿಗೃಹಗಳಲ್ಲೂ ನಿಗಾಯಿರಿಸಲಾಗಿದೆ. ವಸತಿಗೃಹಗಳಲ್ಲಿ ಸಂಶಯಾಸ್ಪದ ರಈತಿಯಲ್ಲಿ ಕೊಠಡಿ ಪಡೆದುಕೊಂಡವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಡಿ. 31ರಂದು ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಅಳವಡಿಸಲು ಅನುಮತಿ ನೀಡಲಾಗಿದೆ. ಒಂದು ಸ್ಥಳದಲ್ಲಿ ಒಂದು ಸಂಗಟನೆಗೆ ಮಾತ್ರ ಕಾರ್ಯಕ್ರಮ ನಡೆಸಲು ಅವಕಾಶವಿದ್ದು, ಗಲಭೆ, ಘರ್ಷಣೆಗೆ ಯತ್ನಿಸಿದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲ ಠಾಣೆಗಳಿಗೂ ಸಂದೇಶ ರವಾನಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಲ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ನಿಟ್ಟಿನಲ್ಲಿ ಇತರ ರಾಜ್ಯಗಳಿಂದ ಮಾದಕ ವಸ್ತು, ಮದ್ಯ ಜಿಲ್ಲೆಗೆ ರವಾನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಅಬಕಾರಿ ದಳದೊಂದಿಗೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಮಾದಕ ದ್ರವ್ಯ ರವಾನೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಖ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ಚುರುಕುಗೊಳಿಸಲಾಗಿದೆ.