ಪೆರ್ಲ: ಏಡ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1988 ರಿಂದ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ನಾಲಂದ ಕಾಲೇಜು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಜ್ ಕುಮಾರ್ ಪಿ. ತಿಳಿಸಿದರು.
ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ - 49 ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಲಾದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಏಡ್ಸ್ ಸೋಂಕನ್ನು ಮೊತ್ತ ಮೊದಲ ಬಾರಿ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಗಿದೆ.ಭಾರತದಲ್ಲಿ 1986ರಲ್ಲಿ ಚೆನ್ನೈನಲ್ಲಿ ಸೋಂಕು ಪತ್ತೆಯಾಗಿದೆ. ಏಡ್ಸ್‍ಗೆ ಕಾರಣವಾದ ವೈರಸ್ ಹೆಚ್‍ಐವಿ ಎಂಬುದನ್ನು 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.ಸುಮಾರು 35 ಮಿಲಿಯನ್‍ಗಿಂತಲೂ ಹೆಚ್ಚು ಜನರು ಹೆಚ್‍ಐವಿ ಅಥವಾ ಏಡ್ಸ್ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ.
ಹೆಚ್‍ಐವಿ, ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕ್ರೋಢೀಕರಿಸುವುದು, ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ರೋಗದ ಬಗ್ಗೆ ಜಾಗೃತಿ ಹೆಚ್ಚಿಸಲು, ಹೆಚ್‍ಐವಿ ಸೋಂಕಿತರಿಗೆ ಮನೋಬಲ ನೀಡುವುದು ಮತ್ತು ಅವರು ಅನುಭವಿಸುವ ಕಳಂಕ, ತಾರತಮ್ಯವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೇಳೆಯುವ ಮುಖ್ಯ ಉದ್ದೇಶದೊಂದಿಗೆ ಕಳೆದ 33ವರ್ಷಗಳಿಂದ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ.
ಎಚ್.ಐ.ವಿ ಸೋಂಕನ್ನು ಗುಣಪಡಿಸಲಾಗದು, ಆದರೆ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಅದನ್ನು ನಿಯಂತ್ರಿಸಬಹುದು.ರೋಗನಿರ್ಣಯ, ನಿರ್ವಹಣೆ ಮತ್ತು ಆರೈಕೆಯೊಂದಿಗೆ ಏಡ್ಸ್ ಸೋಂಕಿರು ದೀರ್ಘಕಾಲ ಆರೋಗ್ಯಕರ ಜೀವನವನ್ನು ನಡೆಸಬಹುದು.ವೈರಸ್ ಹರಡುವಿಕೆಯ ವಿರುದ್ಧ ರ್ಯಾಲಿ, ಚಟುವಟಿಕೆಗಳು, ಸಾಂಕ್ರಾಮಿಕದ ಸ್ಥಿತಿಯ ಬಗ್ಗೆ ಅರಿವು ಮೂಡಿಸುವುದು, ರೋಗ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪ್ರಪಂಚದಾದ್ಯಂತ ಏಡ್ಸ್ ರೋಗದ ವಿರುದ್ಧ ಕಾಳಜಿಯನ್ನು ಉತ್ತೇಜಿಸುವುದು ಏಡ್ಸ್ ಜಾಗೃತಿ ದಿನಾಚರಣೆಯ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಎನ್ನೆಸ್ಸೆಸ್ ಕಾರ್ಯದರ್ಶಿ ಹಾಗೂ ಸ್ವಯಂಸೇವಕರು ಏಡ್ಸ್ ವಿರುದ್ಧ ಜಾಗೃತಿ ಹಾಗೂ ಎಚ್ ಐವಿಯೊಂದಿಗೆ ಜೀವನ ನಡೆಸುವ ಜನರ ಒಗ್ಗಟ್ಟಿನ ಸಂಕೇತವಾಗಿ ಕೆಂಪು ರಿಬ್ಬನ್ ಪಿನ್ ಮಾಡಿದರು.ಎಚ್‍ಐವಿಯ ಕಳಂಕ ನಿವಾರಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರತಿಜ್ಞೆ ಮಾಡಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯಾ ಚಂದ್ರನ್ ಕಾರ್ಯಕ್ರಮ ಸಂಯೋಜಿಸಿದರು.