-
ಮಧೂರು: ಸರ್ವಾಂಗ ಸುಂದರ ಕಲೆಯಾಗಿರುವ ಯಕ್ಷಗಾನವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬನ ಮೇಲಿದೆ ಎಂಬುದಾಗಿ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಬೃಹತ್ ಯೋಜನೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಭವನವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಿರಕ್ಷರಿಗಳನ್ನೂ ಜ್ಞಾನವಂತರನ್ನಾಗಿಸಿದ ಕಲೆ ಯಕ್ಷಗಾನವಾಗಿದೆ. ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ತವರಲ್ಲಿ ಯಕ್ಷಗಾನ ಕಲೆಗೆ ಶ್ರೇಷ್ಠ ಭವನ ನಿರ್ಮಿಸುವ ಮೂಲಕ ಯಕ್ಷಗಾನವನ್ನು ಚಿರಂತನವಾಗುವಂತೆ ಮಾಡುವಲ್ಲಿ ಶ್ರಮಿಸುತ್ತಿರುವ ರಾಮಕೃಷ್ಣ ಮಯ್ಯ ಅವರ ಸಾಧನೆ ಶ್ಲಾಘನೀಯ. ಯಕ್ಷಗಾನದ ಪಾವಿತ್ರ್ಯತೆ ಕಾಪಾಡುವುದರ ಜತೆಗೆ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಭವನದಿಂದ ನಡೆಯಲಿ ಎಂದು ಹಾರೈಸಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರಿ ಮೋಹನದಾಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾಜಸೇವಕ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರು ಯಕ್ಷದರ್ಶಿನಿಯನ್ನು, ಉದ್ಯಮಿ ಕೆ.ಕೆ ಶೆಟ್ಟಿ ಗ್ರಂಥಾಲಯವನ್ನು ಉದ್ಘಾಟಿಸಿದರು. ಮರೆಯಲಾಗದ ಮಹಾನುಭಾವರು ಪುಸ್ತಕ ಮತ್ತು ಛಾಯಾಚಿತ್ರ ಫಲಕವನ್ನು ಯತಿವರ್ಯರು ಅನಾವರಣಗೊಳಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್, ಲಕ್ಷ್ಮೀನಾರಾಯಣ ಕಾವು, ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ತೆಂಗಿನ ಹಿಂಗಾರ ಅರಳಿಸುವ ಮೂಲಕ ಸಮಾರಂಭವನ್ನು ಯತಿದ್ವಯರಾದ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ರಾಜಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ರಾವ್ ಚಿಗುರುಪಾದೆ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀಧರ್ಮಸ್ಥಳ ಮೇಳದವರಿಂದ ನಂದಿ ನಂದಿನಿ ಯಕ್ಷಗಾನ ಬಯಲಾಟ ಜರುಗಿತು.