HEALTH TIPS

ಇಂಟರ್ನೆಟ್ ಸ್ಥಗಿತದ ಮಾರ್ಗದರ್ಶಿ ಸೂತ್ರಗಳ ಜಾರಿ ಕೋರುವ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

               ವದೆಹಲಿ :ಇಂಟರ್ನೆಟ್ ಸ್ಥಗಿತಕ್ಕೆ ಸಂಬಂಧಿಸಿ 2020ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವಂತೆ ಕೋರಿ ಸಮಾಜ ಸೇವಾ ಸಂಘಟನೆ 'ಫೌಂಡೇಶನ್ ಫಾರ್ ಮೀಡಿಯ ಪ್ರೊಫೆಶನಲ್ಸ್' ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

            ಅನುರಾಧ ಭಾಸಿನ್ ಪ್ರಕರಣದಲ್ಲಿ, ವಕೀಲ ಪ್ರತೀಕ್ ಕೆ. ಚಡ್ಡಾರ ಮೂಲಕ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ದೀಪಂಕರ್ ದತ್ತ ಮತ್ತು ಅರವಿಂದ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವೊಂದು ನಡೆಸುತ್ತಿತ್ತು.

              ಅನುರಾಧ ಭಾಸಿನ್ ಪ್ರಕರಣದ ತೀರ್ಪಿನಲ್ಲಿ, ಇಂಟರ್ನೆಟ್ ಮೇಲೆ ವಿಧಿಸಲಾಗುವ ನಿರ್ಬಂಧಗಳಿಗೆ ಸಂಬಂಧಿಸಿದ ಎಲ್ಲಾ ಆದೇಶಗಳನ್ನು ಸರಕಾರಗಳು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗೆ ಮಾಡುವುದರಿಂದ ಇಂಟರ್ನೆಟ್ ಸ್ಥಗಿತದಿಂದ ಬಾಧಿತರಾಗುವ ಜನರು ಈ ಆದೇಶಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇಂಟರ್ನೆಟ್ ಸೇವೆಗಳನ್ನು ಅನಿರ್ಧಿಷ್ಟಾವಧಿವರೆಗೆ ಸ್ಥಗಿತಗೊಳಿಸಲು ಭಾರತೀಯ ಕಾನೂನುಗಳು ಅವಕಾಶ ನೀಡುವುದಿಲ್ಲ ಹಾಗೂ ಇಂಟರ್ನೆಟ್ ಸ್ಥಗಿತಕ್ಕೆ ಸೂಚನೆ ನೀಡುವ ಆದೇಶಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತವೆ ಎಂಬುದಾಗಿಯೂ ಸರ್ವೋಚ್ಛ ನ್ಯಾಯಾಲಯ ಹೇಳಿತ್ತು.

                ಫೌಂಡೇಶನ್ ತನ್ನ ಅರ್ಜಿಯಲ್ಲಿ, ಇಂಟರ್ನೆಟ್ ಮೇಲೆ ನಿರ್ಬಂಧ ಹೇರುವ ಎಲ್ಲಾ ಆದೇಶಗಳನ್ನು ಸಕ್ರಿಯವಾಗಿ ಪ್ರಕಟಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶ ನೀಡಬೇಕೆಂದು ಸುಪ್ರೀಂ ಕೋರ್ಟನ್ನು ಕೋರಿತ್ತು. ಅದೂ ಅಲ್ಲದೆ, ಇಂಟರ್ನೆಟ್ ಸ್ಥಗಿತಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಅರ್ಜಿಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವಂತೆಯೂ ಅದು ನ್ಯಾಯಾಲಯವನ್ನು ಕೋರಿತ್ತು.

                ಗುರುವಾರ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಪೀಠವು, ರಾಜ್ಯಗಳಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಆಧರಿಸಿ ಇಂಟರ್ನೆಟ್ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಹೇಳಿತು.

ಈಗಾಗಲೇ ಇತ್ಯರ್ಥಗೊಂಡಿರುವ ವಿಷಯವೊಂದಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿರುವುದನ್ನೂ ನ್ಯಾಯಾಲಯವು ಪ್ರಶ್ನಿಸಿತು. ''ಹೆಚ್ಚೆಂದರೆ, ನೀವು ಮರುಪರಿಶೀಲನೆಯನ್ನು ಕೋರಬಹುದಾಗಿದೆ'' ಎಂದು ನ್ಯಾ. ಕುಮಾರ್ ಹೇಳಿದರು.

              ಜಮ್ಮು ಮತ್ತು ಕಾಶ್ಮೀರದಲ್ಲಿ, 2019 ಆಗಸ್ಟ್ನಿಂದ ಹೇರಲಾಗಿರುವ ಅನಿರ್ದಿಷ್ಟಾವಧಿ ಇಂಟರ್ನೆಟ್ ಸ್ಥಗಿತವನ್ನು ಪ್ರಶ್ನಿಸಿ 2019ರಲ್ಲಿ 'ಕಾಶ್ಮೀರ್ ಟೈಮ್ಸ್' ಪತ್ರಿಕೆಯ ಸಂಪಾದಕಿ ಅನುರಾಧ ಭಾಸಿನ್ ಸುಪ್ರೀಂ ಕೋರ್ಟಿಗೆ ಹೋಗಿದ್ದರು. 2019ರ ಆಗಸ್ಟ್ನಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿತ್ತು.

                 ಸುಪ್ರೀಂ ಕೋರ್ಟ್ ಇಂಟರ್ನೆಟ್ ಸ್ಥಗಿತವನ್ನು ರದ್ದುಗೊಳಿಸಲಿಲ್ಲ. ಆದರೆ ಇಂಟರ್ನೆಟ್ ಸ್ಥಗಿತಗೊಳಿಸುವ ಯಾವುದೇ ಆದೇಶವು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಹೇಳಿತ್ತು.

ಆದರೆ, ಅರುಣಾಚಲಪ್ರದೇಶ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯ ಸರಕಾರಗಳು ಇಂಟರ್ನೆಟ್ ಸ್ಥಗಿತ ಆದೇಶಗಳನ್ನು ಮುಂಚಿತವಾಗಿ ಪ್ರಕಟಿಸುತ್ತಿಲ್ಲ ಎಂದು ಅರ್ಜಿದಾರ ಸಂಸ್ಥೆ ಫೌಂಡೇಶನ್ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries