ಕಾಸರಗೋಡು: ಎಣ್ಮಕಜೆ ಗ್ರಾಮ ಪಂಚಾಯಿತಿ ಬಜಕೂಡ್ಲು ಕಾನ ಪ್ರದೇಶದಲ್ಲಿ ಸಾಯಿ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಮನೆಗಳ ಕೀಲಿಕೈ ಫಲಾನುಭವಿಗಳಿಗೆ ಹಸ್ತಾಂತರಿಸುವ ಬಗ್ಗೆ ಸಮಾಲೋಚನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಮನೆಗಳ ಫಲಾನುಭವಿಗಳು, ಸಾಯಿಟ್ರಸ್ಟ್ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆ ಆಯೋಜಿಸಲಾಗಿತ್ತು. ಎಣ್ಮಕಜೆ ಗ್ರಾಮ ಪಂಚಾಯಿತಿ ಮತ್ತು ಕುಟುಂಬಶ್ರೀ ಮಿಷನ್ ಜಂಟಿಯಾಗಿ ಯೋಜನಾ ಪ್ರದೇಶ ಮತ್ತು ಮನೆಗಳಲ್ಲಿ ಅಂತಿಮ ಹಂತದ ಸ್ವಚ್ಛತಾ ಕಾರ್ಯವನ್ನು ನಡೆಸಲಿದೆ. ಜಲಜೀವನ ಮಿಷನ್ ಮೂಲಕ ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಜಲ ಪ್ರಾಧಿಕಾರ ಪ್ರತ್ಯೇಕ ನೀರಿನ ಟ್ಯಾಂಕ್ ಸ್ಥಾಪಿಸಿದೆ. ರಾಜ್ಯ ವಿದ್ಯುತ್ ಮಂಡಳಿಯು ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದು, ಫಲಾನುಭವಿಗಳ ಉಪಸ್ಥಿತಿಯಲ್ಲಿ ಸ್ವಚ್ಛತಾ ಕಾರ್ಯ ಮುಗಿದ ತಕ್ಷಣ ಕೀಲಿಕೈ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಿಂದ ಉಚಿತವಾಗಿ ಔಷಧಿ ಪಡೆಯುತ್ತಿರುವ ಫಲಾನುಭವಿಗಳು ಸಾಯಿ ಗ್ರಾಮಕ್ಕೆ ಬಂದರೂ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗುವುದು. ಪಂಚಾಯಿತಿ ನೇತೃತ್ವದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದು, ಬೀದಿ ದೀಪಗಳನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಬದಿಯಡ್ಕ ಠಾಣೆ ಪೆÇಲೀಸರು ಭದ್ರತೆಗಾಗಿ ರಾತ್ರಿ ಗಸ್ತು ನಡೆಸುತ್ತಿದ್ದು, ಸಾಯಿ ಗ್ರಾಮದಲ್ಲಿ ಕುಟುಂಬಗಳು ನೆಲೆಸಿದ ನಂತರವೂ ಇದು ಮುಂದುವರಿಯಲಿರುವುದಾಗಿ ತಿಳಿಸಿದರು.
ಎಂಡೋಸಲ್ಫಾನ್ ಡೆಪ್ಯುಟಿ ಕಲೆಕ್ಟರ್ ಪಿ.ಸುರ್ಜಿತ್, ಸಾಯಿ ಟ್ರಸ್ಟ್ ಪೆÇೀಷಕ ಅಡ್. ಕೆ.ಮಧುಸೂದನನ್, ಮಂಜೇಶ್ವರಂ ತಹಸೀಲ್ದಾರ್ ಟಿ. ಸಾಜಿ, ಎಣ್ಮಕಜೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ. ಹಂಸ, ಎಣ್ಮಕಜೆ ಗ್ರಾಮ ಪಂಚಾಯಿತಿಯ ಕೇರಳ ಜಲ ಪ್ರಾಧಿಕಾರ ಬೋವಿಕಾನಂ ವಿಭಾಗದ ಸಹಾಯಕ ಅಭಿಯಂತರ ಟಿ. ಜಯರಾಜ್, ಪೆರ್ಲ ಎಲೆಕ್ಟ್ರಿಕಲ್ ವಿಭಾಗದ ಪ್ರತಿನಿಧಿ ಎ.ಕೆ.ರಾಜಗೋಪಾಲ ನಾಯ್ಕ್, ಬದಿಯಟುಕ ಪೆÇಲೀಸ್ ಠಾಣೆ ಎಸ್.ಐ. ಸಿ. ಎಂ ಥಾಮಸ್, ಅಧಿಕಾರಿ ಪಿ. ಅಬ್ದುಲ್ ಹಮೀದ್, ಕುಟುಂಬಶ್ರೀ ಡಿಪಿಎಂ ಕೆ.ವಿ.ಲಿಜಿನ್, ಸಾಯಿಗ್ರಾಮ ಯೋಜನೆಯ ಫಲಾನುಭವಿಗಳು ಮತ್ತಿತರರು ಭಾಗವಹಿಸಿದ್ದರು.
ಸೌಲಭ್ಯಗಳೇನು:
ಎಣ್ಮಕಜೆ ಗ್ರಾಮದಲ್ಲಿ ನಿರ್ಮಿಸಿರುವ ಸಾಯಿ ಗ್ರಾಮದಲ್ಲಿ ಪ್ರತಿ ಕುಟುಂಬಕ್ಕೆ ಐದು ಸೆಂಟ್ಸ್ ಜಮೀನು ಮಂಜೂರುಮಾಡಿ ಇದರಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಮನೆಗಳಲ್ಲಿ 500 ಲೀಟರ್ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಜಲಜೀವನ ಮಿಷನ್ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಿದೆ. ಮನೆ ಹೊರಾಂಗಣದಲ್ಲಿ ಸಿಟೌಟ್ ಸಭಾಂಗಣ, ಡಬಲ್‍ಮನೆಗಳಲ್ಲಿ ಮಲಗುವ ಕೋಣೆ, ಅಟ್ಯಾಚ್ಡ್ ಬಾತ್ ರೂಂ, ಅಡುಗೆ ಮನೆ ಮತ್ತು ಹೊಗೆ ರಹಿತ ಅಗ್ಗಿಸ್ಟಿಕೆ ಅಳವಡಿಸಲಾಗಿದೆ. ಎಂಡೋಸಲ್ಫಾನ್ ಪೀಡಿತರಿಗಾಗಿ ಮನೆಗಳು ಇರುವುದರಿಂದ, ಗಾಲಿಕುರ್ಚಿಗೆ ಪ್ರವೇಶಿಸಬಹುದಾದ ಇಳಿಜಾರುಗಳನ್ನು ಸಹ ಒದಗಿಸಲಾಗಿದೆ. ಎಲ್ಲ ಮನೆಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ರಹಿತ ಎಂಡೋಸಲ್ಫಾನ್ ಸಂತ್ರಸ್ತರಿಂದ ಚೀಟಿ ಎತ್ತುವ ಮೂಲಕ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ.